![](https://kannadadunia.com/wp-content/uploads/2019/09/best-mobile-apps-featured.jpg)
ನವದೆಹಲಿ: ಮೊಬೈಲ್ ಗ್ರಾಹಕರಿಗೆ ಆಘಾತಕಾರಿ ಮಾಹಿತಿ ಇಲ್ಲಿದೆ. ಮೊಬೈಲ್ ಸೇವೆ ದುಬಾರಿಯಾಗಲಿದೆ ಎಂದು ಹೇಳಲಾಗಿದೆ.
ಭಾರತದ ಪ್ರಮುಖ ದೂರಸಂಪರ್ಕ ಕಂಪನಿಗಳಾದ ಭಾರ್ತಿತಿ ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಡಿಸೆಂಬರ್ ಅಂತ್ಯದ ವೇಳೆಗೆ ಇಲ್ಲವೇ ಜನವರಿಯಲ್ಲಿ ಮೊಬೈಲ್ ಸೇವಾ ಶುಲ್ಕದಲ್ಲಿ ಹೆಚ್ಚಳ ಮಾಡಬಹುದು ಎಂದು ಹೇಳಲಾಗಿದೆ.
ಭಾರ್ತಿ ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಶುಲ್ಕ ಹೆಚ್ಚಳ ಮಾಡುತ್ತಿದ್ದಂತೆ ಜಿಯೋ ಕೂಡ ಶುಲ್ಕ ಹೆಚ್ಚಳ ಮಾಡಲು ಮುಂದಾಗಿದೆ. ಮೊಬೈಲ್ ಸೇವೆ ನೀಡಲು ಅಗತ್ಯವಿರುವ ಪರವಾನಿಗೆ ನೀಡಬೇಕಿದ್ದ ಶುಲ್ಕಕ್ಕೆ ಬದಲಿಗೆ ಕಂಪನಿಗಳು ಆದಾಯದ ಒಂದು ಭಾಗವನ್ನು ಸರ್ಕಾರಕ್ಕೆ ಸಲ್ಲಿಸಬೇಕು. ಹೊಂದಾಣಿಕೆ ಮಾಡಿದ ಒಟ್ಟು ವರಮಾನದ ಭಾಗವಾಗಿ ಸರ್ಕಾರಕ್ಕೆ ಸಾವಿರಾರು ಕೋಟಿ ರೂಪಾಯಿಗಳನ್ನು ಮೊಬೈಲ್ ಕಂಪನಿಗಳು ಸಲ್ಲಿಸಬೇಕಿರುವ ಕಾರಣ ದರ ಏರಿಕೆಯಾಗಲಿದೆ.
ಮೊಬೈಲ್ ಸೇವಾ ಕಂಪನಿಗಳು ಮತ್ತು ಸರ್ಕಾರದ ನಡುವಿನ ಈ ಸಮಸ್ಯೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು 10 ವರ್ಷ ವ್ಯಾಜ್ಯ ನಡೆದಿದೆ. ಹೊಂದಾಣಿಕೆ ಮಾಡಿದ ವರಮಾನದ ಹಣವನ್ನು ಮೊಬೈಲ್ ಕಂಪನಿಗಳು ಪಾವತಿಸಬೇಕೆಂದು ಸುಪ್ರೀಂಕೋರ್ಟ್ ಕಳೆದ ವರ್ಷವೇ ಆದೇಶಿಸಿದೆ. 2019 ರ ಡಿಸೆಂಬರ್ ನಲ್ಲಿ ಸೇವಾ ಶುಲ್ಕ ಏರಿಕೆ ಮಾಡಿದ್ದ ಮೊಬೈಲ್ ಕಂಪನಿಗಳು ಮತ್ತೆ ಶುಲ್ಕ ಹೆಚ್ಚಳಕ್ಕೆ ಮುಂದಾಗಿವೆ.
ಕಂಪನಿಗಳಿಗೆ ಸಾಲ ಮರುಪಾವತಿ, 5 ಜಿ ತಂತ್ರಜ್ಞಾನ ಅಳವಡಿಕೆ, ಹೊಂದಾಣಿಕೆ ಮಾಡಿದ ಒಟ್ಟು ವರಮಾನದ ಪಾವತಿಗಾಗಿ ಹೆಚ್ಚಿನ ಹಣ ಅಗತ್ಯವಿದ್ದು, ಇದನ್ನು ಭರಿಸಲು ಅನಿವಾರ್ಯವಾಗಿ ಸೇವಾ ಶುಲ್ಕ ಏರಿಕೆ ಮಾಡಲಾಗುವುದು ಎಂದು ಹೇಳಲಾಗಿದೆ.
ಆದರೆ, ಸೇವಾ ಶುಲ್ಕ ಏರಿಕೆ ಮಾಡಿದಲ್ಲಿ ಗ್ರಾಹಕರ ಸಂಖ್ಯೆಯಲ್ಲಿ ಇಳಿಕೆಯಾಗುವ ಅಪಾಯ ಕೂಡ ಇದೆ. ಈ ಹಿನ್ನೆಲೆಯಲ್ಲಿ ಡೇಟಾ ದರವನ್ನು ಹೊರೆಯಾಗದಂತೆ ಏರಿಕೆ ಮಾಡಲಾಗುವುದು. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಡೇಟಾ ದರ ಅತ್ಯಂತ ಕಡಿಮೆ ಇದೆ. ಅಮೆರಿಕದಲ್ಲಿ 1 ಜಿಬಿ ಡೇಟಾ 918 ರೂ., ಬ್ರಿಟನ್ ನಲ್ಲಿ 495 ರೂ., ಜಿಂಬಾಬ್ವೆಯಲ್ಲಿ ಸುಮಾರು 5 ಸಾವಿರ ರೂ. ದರ ಇದೆ. ಭಾರತದಲ್ಲಿ 1 ಜಿಬಿ ಡೇಟಾ ದರ 6.68 ರೂಪಾಯಿ ಇದೆ. ಶೀಘ್ರವೇ ದರ ಏರಿಕೆ ಮಾಡಲು ಟೆಲಿಕಾಂ ಕಂಪನಿಗಳು ಮುಂದಾಗಿದೆ ಎನ್ನಲಾಗಿದೆ.