ನವದೆಹಲಿ: ಭಾರತದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಉಳಿತಾಯ ಬ್ಯಾಂಕ್ ಖಾತೆ ಗ್ರಾಹಕರಿಗೆ ಕನಿಷ್ಠ ಮಿತಿ ಉಳಿಸಿಕೊಳ್ಳುವುದಕ್ಕೆ ಶುಲ್ಕ ವಿಧಿಸುತ್ತಿಲ್ಲ ಎಂದು ಸ್ಪಷ್ಟನೆ ನೀಡಿದೆ. ಎಸ್ಎಂಎಸ್ ಶುಲ್ಕವನ್ನು ಕೂಡ ಮನ್ನಾ ಮಾಡಿದೆ ಎಂದು ಪ್ರಕಟಿಸಿದೆ.
ಎಸ್ಬಿಐ ಉಳಿತಾಯ ಖಾತೆದಾರರಿಗೆ ಇದು ಶುಭ ಸುದ್ದಿಯಾಗಿದ್ದು ಎಸ್ಎಂಎಸ್ ಸೇವೆ ಮತ್ತು ಮಾಸಿಕ ಸರಾಸರಿ ಬ್ಯಾಲೆನ್ಸ್ ಉಳಿಸಿಕೊಳ್ಳಲು ಶುಲ್ಕವನ್ನು ಪಾವತಿಸಬೇಕಿಲ್ಲ ಎಂದು ಹೇಳಲಾಗಿದೆ.
44 ಕೋಟಿಗೂ ಹೆಚ್ಚು ಉಳಿತಾಯ ಖಾತೆಗಳನ್ನು ಎಸ್ಬಿಐ ಹೊಂದಿದ್ದು ನೆಟ್ ಬ್ಯಾಂಕಿಂಗ್ ಮತ್ತು ಚೆಕ್ ಬುಕ್ ಸೌಲಭ್ಯ ಹೊಂದಿರುವ ಎಲ್ಲ ಎಸ್ಬಿಐ ಉಳಿತಾಯ ಖಾತೆಗಳಿಗೆ ಬದಲಾವಣೆ ಅನ್ವಯವಾಗಲಿದೆ.
ತಮ್ಮ ಖಾತೆಗಳಲ್ಲಿ ಹೆಚ್ಚಿನ ಬ್ಯಾಲೆನ್ಸ್ ಕಾಯ್ದುಕೊಳ್ಳುವ ಎಸ್ಬಿಐ ಗ್ರಾಹಕರಿಗೆ ಉಚಿತ ಎಟಿಎಂ ವಹಿವಾಟು ನೀಡಲಿದೆ. ಖಾತೆಗಳಲ್ಲಿ ಒಂದು ಲಕ್ಷ ರೂಪಾಯಿಗಿಂತ ಹೆಚ್ಚಿನ ಮೊತ್ತ ಉಳಿಸಿಕೊಳ್ಳುವ ಗ್ರಾಹಕರು ಒಂದು ತಿಂಗಳಲ್ಲಿ ಅನಿಯಮಿತ ಸಂಖ್ಯೆಯ ಉಚಿತ ಎಟಿಎಂ ವಹಿವಾಟು ಲಾಭ ಪಡೆಯಬಹುದಾಗಿದೆ.