ಕೊರೊನಾ ಬಿಕ್ಕಟ್ಟಿನ ಮಧ್ಯೆ ಕೆಲ ರಾಜ್ಯಗಳಲ್ಲಿ ಅನ್ಲಾಕ್ ಜಾರಿಯಲ್ಲಿದ್ದು, ವಲಸೆ ಕಾರ್ಮಿಕರು ಕೆಲಸ ಹುಡುಕಿಕೊಂಡು ಮತ್ತೊಮ್ಮೆ ದೊಡ್ಡ ನಗರಗಳಿಗೆ ಮರಳಲು ಪ್ರಾರಂಭಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ವಲಸೆ ಕಾರ್ಮಿಕರಿಗೆ ಅನುಕೂಲ ಮಾಡಿಕೊಡಲು ಕೇಂದ್ರ ಸರ್ಕಾರ ಕೆಲವು ಕಾನೂನುಗಳನ್ನು ಬದಲಾಯಿಸಲು ತಯಾರಿ ನಡೆಸುತ್ತಿದೆ. ವಲಸೆ ಕಾರ್ಮಿಕರನ್ನು ಸಾಮಾಜಿಕ ಭದ್ರತೆಗೆ ಒಳಪಡಿಸಲು ಕನಿಷ್ಠ ಪಿಂಚಣಿ ಮತ್ತು ಆರೋಗ್ಯ ಮತ್ತು ಜೀವ ವಿಮಾ ರಕ್ಷಣೆಯಂತಹ ದೊಡ್ಡ ಪರಿಹಾರವನ್ನು ಒದಗಿಸಲು ಸಿದ್ಧತೆಗಳನ್ನು ಚುರುಕುಗೊಳಿಸಿದೆ.
ಸಂಸತ್ತಿನ ಸ್ಥಾಯಿ ಸಮಿತಿಯು ವಲಸೆ ಕಾರ್ಮಿಕರನ್ನು ಗಮನದಲ್ಲಿಟ್ಟುಕೊಂಡು ತನ್ನ ಶಿಫಾರಸುಗಳಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿದೆ. 2020 ರ ಜುಲೈ ಅಂತ್ಯದ ವೇಳೆಗೆ ಸ್ಥಾಯಿ ಸಮಿತಿ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುತ್ತದೆ. ಅದಕ್ಕೆ ಸಂಬಂಧಿಸಿದ ಮಸೂದೆಯನ್ನು ಮುಂದಿನ ಸಂಸತ್ತಿನ ಅಧಿವೇಶನದಲ್ಲಿ ಅಂಗೀಕರಿಸಲು ಸರ್ಕಾರ ಸಿದ್ಧತೆ ನಡೆಸಿದೆ. ಮೂಲಗಳ ಪ್ರಕಾರ, ಸಾಮಾಜಿಕ ಭದ್ರತಾ ಸಂಹಿತೆಯಲ್ಲಿ ಹೊಸ ನಿಬಂಧನೆಗಳನ್ನು ಸೇರಿಸಲಾಗುವುದು. ಗುತ್ತಿಗೆ ಕಾರ್ಮಿಕರ ಸ್ಥಾನಮಾನವನ್ನು ವಲಸೆ ಕಾರ್ಮಿಕರಿಗೆ ನೀಡಲು ಈಗ ಅವಕಾಶ ಕಲ್ಪಿಸಲಾಗುವುದು ಎನ್ನಲಾಗ್ತಿದೆ.
ಸಾಮಾಜಿಕ ಭದ್ರತಾ ಸಂಹಿತೆಯಲ್ಲಿ ವಲಸೆ ಕಾರ್ಮಿಕರಿಗಾಗಿ ವಿಶೇಷ ನೀತಿಯನ್ನು ತರಲಾಗುವುದು. ಸಂಸತ್ತಿನ ಸ್ಥಾಯಿ ಸಮಿತಿಯು ವಲಸೆ ಕಾರ್ಮಿಕರಿಗೆ ಆರೋಗ್ಯ ಮತ್ತು ಜೀವ ರಕ್ಷಣೆ ವಿಮೆಯ ಶಿಫಾರಸು ಮಾಡಿದೆ. ವಲಸೆ ಕಾರ್ಮಿಕರಿಗೆ ಕನಿಷ್ಠ ಪಿಂಚಣಿ ಸಹ ನೀಡಬೇಕು ಎನ್ನಲಾಗ್ತಿದೆ.
ಹೊಸ ಉದ್ದೇಶಿತ ನೀತಿಯಡಿ ವಲಸೆ ಕಾರ್ಮಿಕರ ನೋಂದಣಿ ಕಡ್ಡಾಯವಾಗಲಿದೆ. ವಲಸೆ ಕಾರ್ಮಿಕರಿಗೆ ಸಂಬಳವನ್ನೂ ನಿಗದಿಪಡಿಸಲಾಗುವುದು. ವಲಸೆ ಕಾರ್ಮಿಕರು ವರ್ಷಕ್ಕೊಮ್ಮೆ ತಮ್ಮ ಊರಿಗೆ ಭೇಟಿ ನೀಡುವ ವೆಚ್ಚವನ್ನು ಸಹ ಪಡೆಯುತ್ತಾರೆ. ಇದಕ್ಕಾಗಿ ಅಂತರರಾಜ್ಯ ವಲಸೆ ಕಾರ್ಮಿಕರ ಕಾಯ್ದೆ 1979 ಕ್ಕೆ ತಿದ್ದುಪಡಿ ತರಲಾಗುವುದು. 60 ವರ್ಷ ವಯಸ್ಸಿನ ನಂತರ ನಿರ್ಮಾಣ ಕಾರ್ಮಿಕರಿಗೆ 1,000 ರೂಪಾಯಿ ಪಿಂಚಣಿ ಮತ್ತು ಜೀವ ವಿಮೆ ನೀಡಬೇಕೆಂದು ಕೇಂದ್ರ ಸರ್ಕಾರ ಮೇ ತಿಂಗಳಲ್ಲಿ ಚಿಂತನೆ ನಡೆಸಿದೆ.