ಮೈಸೂರು: ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಪ್ರಧಾನ ಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ(ಪಿಎಂ ಸ್ವ-ನಿಧಿ) ಯೋಜನೆಯಡಿ ಸಾಲ ಮಂಜೂರಾತಿ ಪಡೆದ ಫಲಾನುಭವಿಗಳಿಗೆ ತ್ವರಿತವಾಗಿ ಬ್ಯಾಂಕ್‍ಗಳಿಂದ ಸಾಲ ವಿತರಿಸಲು ವಿಶೇಷ ಆಂದೋಲನಗಳನ್ನು ಆಯೋಜಿಸಲಾಗಿದೆ.
2021ರ ಫೆಬ್ರವರಿ 26ಕ್ಕೆ ಅನ್ವಯವಾಗುವಂತೆ ಸಾಲಕ್ಕಾಗಿ 19091 ಅರ್ಜಿಗಳು ಬಂದಿದೆ. ಈ ಪೈಕಿ 3562 ಅರ್ಜಿಗಳಿಗೆ ಸಾಲ ಮಂಜೂರಾತಿ ದೊರಕಿದೆ. ಬಾಕಿ ಉಳಿದಿರುವ 15529 ಅರ್ಜಿಗಳಿಗೆ ಸಾಲ ಮಂಜೂರಾತಿ ಹಾಗೂ ಸಾಲ ವಿತರಣೆ ದೊರಕಿಸಬೇಕಾಗಿದೆ.
ಇದಕ್ಕಾಗಿ 2021ರ ಫೆಬ್ರವರಿ 27, ಮಾರ್ಚ್ 6 ಮತ್ತು 13 ರಂದು ನಗರದ ಎಲ್ಲಾ ಬ್ಯಾಂಕ್‍ಗಳ ಸಹಯೋಗದೊಂದಿಗೆ ಹಾಗೂ ಪಟ್ಟಣ ವ್ಯಾಪಾರ ಸಮಿತಿಯ ಸದಸ್ಯರುಗಳ ಸಹಕಾರದೊಂದಿಗೆ ಫಲಾನುಭವಿಗಳಿಗೆ ಅನುಕೂಲಕರವಾದ ಬ್ಯಾಂಕುಗಳ ಪ್ರಾದೇಶಿಕ ವ್ಯವಹಾರ ಕಚೇರಿಗಳ ಸ್ಥಳಗಳಲ್ಲಿ ವಿಶೇಷ ಆಂದೋಲನಗಳನ್ನು ಆಯೋಜಿಸಿ ಸಾಲ ಮಂಜೂರಾತಿ ಹಾಗೂ ಸಾಲ ವಿತರಿಸುವ ಸಲುವಾಗಿ ಕ್ರಮವಹಿಸಲಾಗಿದೆ.
ಸಾಲ ಮಂಜೂರಾತಿ ಪಡೆದ ಬೀದಿ ಬದಿ ವ್ಯಾಪಾರಿಗಳು ಫೆಬ್ರವರಿ 27, ಮಾರ್ಚ್ 6 ಮತ್ತು 13ರಂದು ವಿಶೇಷ ಆಂದೋಲನ ನಡೆಯುವ ಸ್ಥಳಗಳಿಗೆ ಸೂಕ್ತ ದಾಖಲೆಗಳೊಂದಿಗೆ ಹಾಜರಾಗುವಂತೆ ಮೈಸೂರು ಮಹಾನಗರ ಪಾಲಿಕೆಯ ಹೆಚ್ಚುವರಿ ಆಯುಕ್ತರು ತಿಳಿಸಿದ್ದಾರೆ.