ಕೇರಳದ ದೇಗುಲವೊಂದಕ್ಕೆ ಅದ್ಭುತ ಯಾಂತ್ರಿಕ ಆನೆಯನ್ನು ಕೊಡುಗೆಯಾಗಿ ನೀಡಲಾಗಿದೆ. ಈ ಆನೆ ನಿಜವಾದ ಆನೆಯಂತೆಯೇ ಬಹುತೇಕ ಎಲ್ಲ ಕೆಲಸಗಳನ್ನು ಮಾಡಬಲ್ಲದು. ಪ್ರಖ್ಯಾತ ಸಿತಾರ್ ವಾದಕಿ ಅನೌಷ್ಕಾ ಶಂಕರ್, ಸಿತಾರ್ ದಂತಕಥೆ ಪಂಡಿತ್ ರವಿಶಂಕರ್ ಅವರ ಪುತ್ರಿ ಮತ್ತು ಪೇಟಾ (ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್) ಭಾರತ ಇವರು ಜಂಟಿಯಾಗಿ ಈ ರೋಬೋಟ್ ಆನೆಯನ್ನು ಕೇರಳದ ತ್ರಿಶೂರ್‌ನಲ್ಲಿರುವ ದೇವಸ್ಥಾನಕ್ಕೆ ದೇಣಿಗೆ ನೀಡಿದ್ದಾರೆ.
ಏನಿದರ ವಿಶೇಷ ?
ʼಕೊಂಬಾರ ಕಣ್ಣನ್ʼ ಎಂದು ಹೆಸರಿಸಲಾದ ಈ ಆನೆ ತ್ರಿಶೂರ್‌ನ ಕೊಂಬಾರ ಶ್ರೀಕೃಷ್ಣ ಸ್ವಾಮಿ ದೇವಸ್ಥಾನಕ್ಕೆ ಲಭ್ಯವಾಗಿದೆ. ಈ ಯಾಂತ್ರಿಕ ಆನೆ ಕೊಂಬಾರ ಕಣ್ಣನ್ ನಿಜವಾದ ಆನೆಯಂತೆಯೇ ತಲೆ ಅಲ್ಲಾಡಿಸುವುದು, ಕಿವಿ ಮತ್ತು ಕಣ್ಣುಗಳನ್ನು ಚಲಿಸುವುದು, ಬಾಲವನ್ನು ತಿರುಗಿಸುವುದು ಮತ್ತು ಸೊಂಡಿಲನ್ನು ಎತ್ತುವುದು ಮುಂತಾದ ಎಲ್ಲ ಕೆಲಸಗಳನ್ನು ಮಾಡಬಲ್ಲದು. ಅಲ್ಲದೆ, ಈ ರೋಬೋಟ್ ಆನೆ ನೀರನ್ನು ಸಹ ಚಿಮ್ಮಬಲ್ಲದು.
ಈ ಯಾಂತ್ರಿಕ ಆನೆಯ ಮೇಲೆ ಸವಾರಿ ಮಾಡಬಹುದು ಮತ್ತು ಯಾವುದೇ ತೊಂದರೆಯಿಲ್ಲದೆ ಧಾರ್ಮಿಕ ವಿಧಿಗಳು ಮತ್ತು ಮೆರವಣಿಗೆಗಳಲ್ಲಿ ಬಳಸಬಹುದು. ಇದನ್ನು ಸುಲಭವಾಗಿ ಪ್ಲಗ್ ಇನ್ ಮಾಡುವ ಮೂಲಕ ಕಾರ್ಯನಿರ್ವಹಿಸಬಹುದು. ಅಗತ್ಯವಿದ್ದಾಗ ಈ ಆನೆಯನ್ನು ಚಕ್ರಗಳ ಮೇಲೆ ಜೋಡಿಸಿ ನಡೆಯುವಂತೆ ಮಾಡಬಹುದು. ರಬ್ಬರ್, ಫೈಬರ್, ಲೋಹ, ಜಾಲರಿ, ಫೋಮ್ ಮತ್ತು ಸ್ಟೀಲ್‌ನಿಂದ ನಿರ್ಮಿಸಲಾದ ಈ ಯಾಂತ್ರಿಕ ಆನೆ ಐದು ಮೋಟಾರ್‌ಗಳಲ್ಲಿ ಚಲಿಸುತ್ತದೆ ಮತ್ತು ನೈಜ ಆನೆಯ ಚಲನೆಗಳನ್ನು ಅನುಕರಿಸುತ್ತದೆ.
ಈ ದೇಣಿಗೆಯಿಂದ ದೇವಸ್ಥಾನವು ನಿಜವಾದ ಆನೆಗಳ ಅಗತ್ಯವಿಲ್ಲದೆ ತನ್ನ ಸಮಾರಂಭಗಳನ್ನು ನಡೆಸಲು ಸಾಧ್ಯವಾಗುತ್ತದೆ. ನಿಜವಾದ ಆನೆಗಳನ್ನು ಯಾಂತ್ರಿಕ ಆನೆಗಳಿಂದ ಬದಲಾಯಿಸುವುದರಿಂದ, ಆನೆಗಳು ತಮ್ಮ ನೈಸರ್ಗಿಕ ಆವಾಸಸ್ಥಾನದಲ್ಲಿರಲು ಸಾಧ್ಯವಾಗುತ್ತದೆ ಮತ್ತು ಸೆರೆವಾಸ, ಸರಪಳಿಗಳು ಮತ್ತು ದುರ್ಬಳಕೆಯಿಂದ ಅವುಗಳನ್ನು ರಕ್ಷಿಸಬಹುದು ಎಂದು ಪೇಟಾ ಹೇಳಿದೆ.
#WATCH | Thrissur, Kerala: Sitarist Anoushka Shankar and PETA India donated a life-size mechanical elephant, Kombara Kannan, to the Kombara Sreekrishna Swami Temple in Thrissur, to conduct ceremonies without using real elephants. pic.twitter.com/Q3m5rtn1jS
— ANI (@ANI) February 6, 2025