ದೇಶದ ಅತಿದೊಡ್ಡ ಕಾರು ನಿರ್ಮಾಣ ಸಂಸ್ಥೆ ಮಾರುತಿ ಸುಜುಕಿ ತನ್ನ ಕೆಲ ಆಯ್ದ ಉತ್ಪನ್ನಗಳ ಮೇಲಿನ ದರವನ್ನ ಇಂದಿನಿಂದ ಏರಿಕೆ ಮಾಡಿದೆ. ಬಿಡಿ ಭಾಗಗಳ ಮೇಲಿನ ದರ ದುಬಾರಿಯಾದ ಹಿನ್ನೆಲೆ ಮಾರುತಿ ಸುಜುಕಿ ಕಂಪನಿ ಈ ನಿರ್ಧಾರವನ್ನ ಕೈಗೊಂಡಿದೆ. ದೆಹಲಿಯ ಎಕ್ಸ್ ಶೋರೂಮ್ ಬೆಲೆಯ ಪ್ರಕಾರ ಇದೀಗ 1.6 ಪ್ರತಿಶತ ಬೆಲೆ ಏರಿಕೆ ಮಾಡಲಾಗಿದೆ. ಈ ತಿಂಗಳಲ್ಲಿ ಮಾರುತಿ ಸುಜುಕಿ ಎರಡನೇ ಬಾರಿಗೆ ದರ ಏರಿಕೆ ಮಾಡಿದೆ. ಈ ಪರಿಷ್ಕೃತ ದರವು ಇಂದಿನಿಂದಲೇ ಜಾರಿಗೆ ತರಲಾಗಿದೆ.
ಆಟೋ ಮೇಕರ್ ಕಂಪನಿಗಳು ವಾಹನ ಬಿಡಿ ಭಾಗಗಳ ಏರಿಕೆ ಹಿನ್ನೆಲೆ ಈ ವರ್ಷದ ಆರಂಭದಲ್ಲೇ ಕಾರಿನ ದರವನ್ನ ಏರಿಕೆ ಮಾಡಿದ್ದವು. ಜನವರಿ ತಿಂಗಳಲ್ಲಿ ಕೆಲ ಕಾರುಗಳ ಬೆಲೆಯಲ್ಲಿ 34 ಸಾವಿರ ರೂಪಾಯಿ ಏರಿಕೆ ಮಾಡಿತ್ತು.
ಇತ್ತ ಮಹೀಂದ್ರಾ & ಮಹೀಂದ್ರಾ ಕಂಪನಿ ಕೂಡ ಜನವರಿ ತಿಂಗಳಲ್ಲಿ ವಾಹನಗಳ ದರದಲ್ಲಿ 1.9 ಪ್ರತಿಶತ ಏರಿಕೆ ಮಾಡಿತ್ತು. ಟಾಟಾ ಮೋಟರ್ಸ್ ಕೂಡ ವಾಹನಗಳ ದರದಲ್ಲಿ 26 ಸಾವಿರ ರೂಪಾಯಿ ಏರಿಕೆ ಮಾಡಿದೆ.
ಮಾರ್ಚ್ 2021ರಲ್ಲಿ ಮಾರುತಿ ಸುಜುಕಿ 1.67 ಲಕ್ಷ ಯುನಿಟ್ ಸೇಲ್ ಗುರಿ ತಲುಪಿತ್ತು. ಕಳೆದ ವರ್ಷ ಇದೇ ತಿಂಗಳಲ್ಲಿ 83,792 ಯುನಿಟ್ ಮಾರಾಟ ಮಾಡಿತ್ತು. 2019-20ನೇ ಸಾಲಿನಲ್ಲಿ ದೇಶದಲ್ಲಿ ಮಾರಾಟ ದರ 18 ಪ್ರತಿಶತ ಇಳಿಕೆ ಕಂಡಿತ್ತು. ಕೋವಿಡ್ 19ನಿಂದಾಗಿ 2020-21ನೇ ಸಾಲಿನ ಆರ್ಥಿಕ ಪ್ರಗತಿಗೆ ಹೊಡೆತ ಬಿದ್ದಿದೆ.