ನವದೆಹಲಿ: ಬಾಡಿಗೆ ಆಧಾರದಲ್ಲಿ ಕಾರ್ ಹೊಂದುವ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ ಇಲ್ಲಿದೆ. ಮಾರುತಿ ಸುಜುಕಿ ಇಂಡಿಯಾ ದೇಶದ 19 ನಗರಗಳಲ್ಲಿ ಬಾಡಿಗೆ ಸೇವೆಯನ್ನು ವಿಸ್ತರಿಸಿದೆ.
ಮಂಗಳೂರು, ಮೈಸೂರು, ಇಂದೋರ್, ಜೈಪುರ ಸೇರಿದಂತೆ ದೇಶದ 19 ನಗರಗಳಲ್ಲಿ ಮಾರುತಿ ಕಾರ್ ಗಳು ಬಾಡಿಗೆಗೆ ಸಿಗಲಿವೆ. ಈ ಸೇವೆ ನೀಡಲು ಮಾರುತಿ ಸುಜುಕಿ ವಿವಿಧ ಸೇವಾ ಕಂಪನಿಗಳೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ.
ಮಾರುತಿ ಕಂಪನಿಯ ಸ್ವಿಫ್ಟ್, ಸ್ವಿಫ್ಟ್ ಡಿಸೈರ್, ವಿತಾರಾ ಬ್ರಿಜಾ, ಇಗ್ನಿಸ್, ಎರ್ಟಿಗಾ ಸೇರಿದಂತೆ ಹಲವು ವಾಹನಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ವಾಹನಗಳನ್ನು ತಿಂಗಳ ಬಾಡಿಗೆ ಆಧಾರದಲ್ಲಿ ವಿವಿಧ ಅವಧಿಗೆ ಪಡೆದು ಚಾಲನೆ ಮಾಡಬಹುದು. ವಾಹನ ಬಳಕೆ, ನಿರ್ವಹಣೆ ಸೇವೆಗಳಿಗೆ ಸಂಬಂಧಿಸಿದ ಶುಲ್ಕಗಳನ್ನು ತಿಂಗಳ ಬಾಡಿಗೆ ಆಧಾರದಲ್ಲಿ ಪಾವತಿಸಬಹುದಾಗಿದೆ. ಬಾಡಿಗೆ ಅವಧಿ ಮುಗಿಯುವ ಸಂದರ್ಭದಲ್ಲಿ ಹೊಸ ಕಾರಿಗೆ ಬದಲಾಯಿಸಿಕೊಳ್ಳಲು ಇಲ್ಲವೇ, ತಾವು ಬಾಡಿಗೆಗೆ ಹೊಂದಿದ ಕಾರ್ ಅನ್ನೇ ಖರೀದಿಸಬಹುದಾಗಿದೆ ಎಂದು ಹೇಳಲಾಗಿದೆ.