ಬೆಂಗಳೂರು: ಅಡುಗೆಮನೆಯ ಅಗತ್ಯ ತರಕಾರಿಗಳಲ್ಲಿ ಒಂದಾದ ಈರುಳ್ಳಿ ಬೆಲೆ ಗಗನಕ್ಕೇರಿದ್ದು ಗ್ರಾಹಕರಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.
ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಈರುಳ್ಳಿ ಬೆಲೆ ಏರಿಕೆ ತಡೆಗೆ ಆಮದು ನಿರ್ಬಂಧವನ್ನು ಸಡಿಲಗೊಳಿಸಿದೆ. ಅತಿವೃಷ್ಟಿಯ ಕಾರಣ ಬೆಳೆ ನಾಶವಾಗಿ ಈರುಳ್ಳಿ ಮಾರುಕಟ್ಟೆಗೆ ಬರುತ್ತಿಲ್ಲ. ಇದರ ಪರಿಣಾಮ ಬೆಲೆ ಹೆಚ್ಚಳವಾಗಿದೆ.
ಕೇಂದ್ರ ಸರ್ಕಾರ ಆಮದು ನಿರ್ಬಂಧ ಸಡಿಲಗೊಳಿಸಿದ ಬೆನ್ನಲ್ಲೇ ಯಶವಂತಪುರದ ಕೃಷಿ ಉತ್ಪನ್ನ ಮಾರುಕಟ್ಟೆಗೆ ಈಜಿಪ್ಟ್ ಈರುಳ್ಳಿ ಪೂರೈಕೆಯಾಗಿದೆ. ಈರುಳ್ಳಿ ದರ ಕೆಜಿಗೆ 120 ರೂ. ವರೆಗೆ ತಲುಪಿದ್ದು ಹಬ್ಬದ ಸಂದರ್ಭದಲ್ಲಿ ಗ್ರಾಹಕರು ಕಂಗಾಲಾಗಿದ್ದಾರೆ.
ಯಶವಂತಪುರ ಕೃಷಿ ಮಾರುಕಟ್ಟೆಗೆ ಈಜಿಪ್ಟ್ ಈರುಳ್ಳಿ ಬಂದಿದ್ದು ಕೆಜಿಗೆ 70 ರೂಪಾಯಿಗೆ ಮಾರಾಟವಾಗುತ್ತಿದೆ. ಈ ಅವಧಿಯಲ್ಲಿ 75 ರಿಂದ 80 ಲೋಡ್ ಈರುಳ್ಳಿ ಪೂರೈಕೆಯಾಗುತ್ತಿದ್ದು ಆದರೆ ಭಾರೀ ಮಳೆಯ ಕಾರಣ ಬೆಳೆ ಇಲ್ಲದೇ ಬೇಡಿಕೆ ಹೆಚ್ಚಾಗಿದೆ. ಈಜಿಪ್ಟ್ ಈರುಳ್ಳಿ ಬಂದಿರುವುದರಿಂದ ಬೆಲೆ ಕಡಿಮೆಯಾಗಬಹುದೆಂದು ಹೇಳಲಾಗಿದೆ.
ಕೇಂದ್ರ ಸರ್ಕಾರ ಈರುಳ್ಳಿ ಬೆಲೆ ಏರಿಕೆ ತಡೆಗೆ ಆಮದು ನಿರ್ಬಂಧ ಸಡಿಲಗೊಳಿಸಿದ್ದು ಈಜಿಪ್ಟ್, ಇರಾನ್ ನಿಂದ ಈರುಳ್ಳಿ ಆಮದು ಮಾಡಿಕೊಂಡು ಸ್ಥಳೀಯ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಬೇಡಿಕೆಯನ್ನು ಕಡಿಮೆ ಮಾಡಲು ಮುಂದಾಗಿದೆ.
ಆಹಾರ ಪೂರೈಕೆ ಮತ್ತು ಗ್ರಾಹಕರ ವ್ಯವಹಾರಗಳ ಸಚಿವಾಲಯದ ವತಿಯಿಂದ ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಭಾರತೀಯ ರಾಷ್ಟ್ರೀಯ ಸಹಕಾರ ಗ್ರಾಹಕರ ಒಕ್ಕೂಟ ಸೇರಿ ವಿವಿಧ ಸಂಸ್ಥೆಗಳ ಮೂಲಕ ಈರುಳ್ಳಿ ಹಂಚಿಕೆ ಮಾಡಲಾಗುವುದು. ಮತ್ತಷ್ಟು ಮಾರ್ಗಗಳ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಅಗತ್ಯ ಈರುಳ್ಳಿ ಪೂರೈಕೆ ಮಾಡಲು ಕ್ರಮಕೈಗೊಳ್ಳಲಾಗಿದೆ. ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಪೂರೈಕೆಯಾದಲ್ಲಿ ಬೆಲೆ ಕಡಿಮೆಯಾಗಲಿದೆ ಎನ್ನಲಾಗಿದ್ದು, ಇದರ ಭಾಗವಾಗಿ ಯಶವಂತಪುರ ಮಾರುಕಟ್ಟೆಗೆ ಈಜಿಪ್ಟ್ ಈರುಳ್ಳಿ ಬಂದಿದೆ ಎಂದು ಹೇಳಲಾಗಿದೆ.