ಬೆಳಗಾವಿ: ಹಣ್ಣುಗಳ ರಾಜ ಮಾವಿನ ಹಣ್ಣಿನ ಬೆಲೆ ಗಗನಲಕ್ಕೇರಿದೆ. ಒಂದು ಮಾವಿನ ಹಣ್ಣಿನ ದರ 333 ರೂ. ಆಗಿದ್ದು, 18 ಹಣ್ಣಿನ ಬಾಕ್ಸ್ ಗೆ 6 ಸಾವಿರ ರೂಪಾಯಿ ದರ ಇದೆ.
ಬೆಳಗಾವಿಯ ಸಗಟು ಹಣ್ಣು ಮಾರುಕಟ್ಟೆಯಲ್ಲಿ ಪ್ರಸ್ತುತ ಮಾವಿನ ಹಣ್ಣು ಇಷ್ಟೊಂದು ಬೆಲೆಗೆ ಮಾರಾಟವಾಗುತ್ತಿದೆ. ಒಂದು ತಿಂಗಳಿನಿಂದ ಬೆಳಗಾವಿ ಮಾರುಕಟ್ಟೆಗೆ ಮಾವಿನ ಹಣ್ಣು ಬರುತ್ತಿದೆ. ಆದರೆ, ದರ ಭಾರಿ ದುಬಾರಿ ಆಗಿರುವುದರಿಂದ ಗ್ರಾಹಕರು ಕಂಗಾಲಾಗಿದ್ದಾರೆ. ಆಪೂಸ್ ಮಾವಿನಹಣ್ಣಿನ ದರ ಹೆಚ್ಚಾಗಿದೆ.
ಬೆಳಗಾವಿ ಮಾರುಕಟ್ಟೆಗೆ ಮಹಾರಾಷ್ಟ್ರದ ಮಾಲವನ್, ಸಿಂಧುದುರ್ಗ, ದೇವಗಢ ಭಾಗದಿಂದ ಅಲ್ಪ ಪ್ರಮಾಣದ ಮಾವು ಮಾರುಕಟ್ಟೆಗೆ ಬರುತ್ತಿದೆ. ಸ್ಥಳೀಯ ಮಾವಿನ ಹಣ್ಣು ಇನ್ನು ಮಾರುಕಟ್ಟೆಗೆ ಬಂದಿಲ್ಲ. ಮಹಾರಾಷ್ಟ್ರದಲ್ಲಿ ಫೆಬ್ರವರಿಯಲ್ಲಿಯೇ ಮಾವಿನ ಫಸಲು ಬರುತ್ತದೆ. ಹೀಗಾಗಿ ಅಲ್ಲಿನ ಹಣ್ಣುಗಳು ಬೇಗನೆ ಮಾರುಕಟ್ಟೆಗೆ ಪ್ರವೇಶಿಸಿವೆ. ಬೆಲೆಯಂತೂ ಬಲು ದುಬಾರಿಯಾಗಿದೆ. ಸ್ಥಳೀಯ ಮಾವಿನ ಹಣ್ಣು ಬರಲು ಇನ್ನೂ ತಿಂಗಳು ಬೇಕಾಗುತ್ತದೆ. ಆಗ ಬೆಲೆ ಇಳಿಕೆಯಾಗಲಿದೆ ಎಂದು ಹೇಳಲಾಗಿದೆ.