ಮಂಗಳೂರು: ಕೊಚ್ಚಿ -ಮಂಗಳೂರು ನೈಸರ್ಗಿಕ ಅನಿಲ ಕೊಳವೆ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ದೇಶಕ್ಕೆ ಸಮರ್ಪಿಸಲಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಇಂದು ಬೆಳಗ್ಗೆ 11 ಗಂಟೆಗೆ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ.
ಅನಿಲ ಆಧಾರಿತ ಆರ್ಥಿಕತೆಯಾಗುವ ಭಾರತದ ಆಶಯಕ್ಕೆ ಪೂರಕವಾದ ಯೋಜನೆ ಇದಾಗಿದೆ. 450 ಕಿಲೋಮೀಟರ್ ಉದ್ದದ ಪೈಪ್ಲೈನ್ ಹೊಂದಿರುವ ಈ ಯೋಜನೆಗೆ ಸುಮಾರು 3000 ಕೋಟಿ ರೂಪಾಯಿ ವೆಚ್ಚವಾಗಿದೆ. ಅಡುಗೆಗೆ ಮಾಲಿನ್ಯಮುಕ್ತ ಅನಿಲದ ನಿರಂತರ ಪೂರೈಕೆ ಮಾಡಲಾಗುತ್ತದೆ. ವಿವಿಧ ಅನಿಲ ಆಧಾರಿತ ಕೈಗಾರಿಕೆಗಳು, ರಸಗೊಬ್ಬರ, ಸಾರಿಗೆ ಮತ್ತು ವಾಹನೋದ್ಯಮ, ಪೆಟ್ರೋಕೆಮಿಕಲ್ ಇತರೆ ವಾಣಿಜ್ಯ ವಲಯಗಳ ಅಭಿವೃದ್ಧಿಗೆ ಅನುಕೂಲವಾಗುತ್ತದೆ.
ಉಡುಪಿ, ದಕ್ಷಿಣ ಕನ್ನಡ, ಕಣ್ಣೂರು, ಕಾಸರಗೋಡು, ಮಾಹೆ, ಕೋಯಿಕೋಡ್, ವಯನಾಡು, ಮಲಪ್ಪುರಂ, ಪಾಲಕ್ಕಡ್, ತ್ರಿಶೂರು ಜಿಲ್ಲೆಗಳ ನಗರ ಅನಿಲ ಪೂರೈಕೆ ಜಾಲಗಳ ಅವಶ್ಯಕತೆಗಳಿಗೆ ಇಂಧನ ಪೂರೈಕೆಯಾಗಲಿದೆ. ಅಲ್ಲದೇ, ಕೈಗಾರಿಕೆಗಳು ಮತ್ತು ವಾಹನಗಳಿಗೆ ಕಡಿಮೆ ವೆಚ್ಚದಲ್ಲಿ ಇಂಧನ ಪೂರೈಕೆಯಾಗಲಿದೆ.
ಯೋಜನೆಯ ನಿರ್ಮಾಣ ಹಂತದಲ್ಲಿ 12 ಲಕ್ಷ ಮಾನವ ದಿನಗಳ ಉದ್ಯೋಗ ಸೃಷ್ಟಿಯ ಜೊತೆ ಬರುವ ದಿನಗಳಲ್ಲಿ ಭಾರಿ ಪ್ರಮಾಣದಲ್ಲಿ ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಕರ್ನಾಟಕ ಮತ್ತು ಕೇರಳದಲ್ಲಿ ಆರ್ಥಿಕ ಪ್ರಗತಿಗೆ ಉತ್ತೇಜನ, ಸ್ವಚ್ಛ ಪರಿಸರ ನಿರ್ಮಾಣಕ್ಕೆ ಅನುಕೂಲವಾಗಲಿದೆ ಎಂದು ಹೇಳಲಾಗಿದೆ.