ನವದೆಹಲಿ: ಮೊದಲ ಹಂತದಲ್ಲಿ 256 ಜಿಲ್ಲೆಗಳಲ್ಲಿ ಚಿನ್ನಾಭರಣಗಳಿಗೆ ಹಾಲ್ ಮಾರ್ಕ್ ಕಡ್ಡಾಯ ನಿಯಮ ಜಾರಿಯಾಗಿದ್ದು, ಮುಂದಿನ ಹಂತದಲ್ಲಿ ದೇಶಾದ್ಯಂತ ಎಲ್ಲ ಜಿಲ್ಲೆಗಳಲ್ಲಿಯೂ ಹಾಲ್ ಮಾರ್ಕ್ ಕಡ್ಡಾಯ ಮಾಡುವ ಪ್ರಕ್ರಿಯೆ ಆರಂಭವಾಗಿದೆ.
ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯದಿಂದ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ಮೊದಲ ಹಂತದಲ್ಲಿ 256 ಜಿಲ್ಲೆಗಳಲ್ಲಿ ಚಿನ್ನಾಭರಣಗಳಿಗೆ ಕಡ್ಡಾಯ ನಿಯಮ ಜಾರಿಯಾಗಿದೆ. ದೇಶದ ಎಲ್ಲಾ ಜಿಲ್ಲೆಗಳಿಗೂ ನಿಯಮ ವಿಸ್ತರಿಸಲು ಪ್ರಕ್ರಿಯೆ ನಡೆದಿದೆ ಎಂದು ಹೇಳಲಾಗಿದೆ.
2021ರ ಜೂನ್ 23 ರಿಂದ ಜಾರಿಗೆ ಬರುವಂತೆ 22 ಕ್ಯಾರೆಟ್, 18 ಕ್ಯಾರೆಟ್, 14 ಕ್ಯಾರೆಟ್ ಚಿನ್ನಾಭರಣಗಳಿಗೆ ಹಾಲ್ ಮಾರ್ಕ್ ಕಡ್ಡಾಯ ಮಾಡಲಾಗಿದೆ. 1.27 ಲಕ್ಷ ಚಿನ್ನಾಭರಣ ವ್ಯಾಪಾರಿಗಳು BIS ನಲ್ಲಿ ನೋಂದಣಿ ಮಾಡಿಸಿಕೊಂಡಿದ್ದಾರೆ. ದೇಶಾದ್ಯಂತ ಹಾಲ್ ಮಾರ್ಕ್ ಕಡ್ಡಾಯ ನಿಯಮ ವಿಸ್ತರಣೆ ಮಾಡಲಾಗುವುದು ಎನ್ನಲಾಗಿದೆ.
ಒಟ್ಟಾರೆಯಾಗಿ, ಕಡ್ಡಾಯ ಹಾಲ್ ಮಾರ್ಕಿಂಗ್ ರೋಲ್ ಔಟ್ ಸುಗಮವಾಗಿದೆ. ಮತ್ತು ಅದನ್ನು ದೇಶದ ಎಲ್ಲಾ ಜಿಲ್ಲೆಗಳಿಗೆ ವಿಸ್ತರಿಸುವ ಪ್ರಕ್ರಿಯೆಯು ಈಗ ನಡೆಯುತ್ತಿದೆ ಎಂದು ಸಚಿವಾಲಯವು ಕ್ಯಾಬಿನೆಟ್‌ಗಾಗಿ ಸಿದ್ಧಪಡಿಸಿದ ತನ್ನ ಮಾಸಿಕ ವರದಿಯಲ್ಲಿ ತಿಳಿಸಿದೆ.