ಕೊಚ್ಚಿ: ಮಾಲ್ ಗಳು ಪಾರ್ಕಿಂಗ್ ಶುಲ್ಕ ಸಂಗ್ರಹಿಸುವಂತಿಲ್ಲ ಎಂದು ಕೇರಳ ಹೈಕೋರ್ಟ್ ಮಹತ್ವದ ಸೂಚನೆ ನೀಡಿದ್ದು, ಶುಲ್ಕ ಸಂಗ್ರಹಿಸಲು ಪರವಾನಿಗೆ ನೀಡಿದ್ದಲ್ಲಿ ಅದರ ಮಾಹಿತಿ ನೀಡುವಂತೆ ನಿರ್ದೇಶಿಸಿದೆ.
ಶಾಪಿಂಗ್ ಮಾಲ್ ಗಳಿಗೆ ಪಾರ್ಕಿಂಗ್ ಶುಲ್ಕ ಸಂಗ್ರಹಿಸುವ ಯಾವುದೇ ಹಕ್ಕು ಇಲ್ಲ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ತಿಳಿಸಿದೆ. ಎರ್ನಾಕುಲಂನಲ್ಲಿರುವ ಲುಲು ಶಾಪಿಂಗ್ ಮಾಲ್ ನಲ್ಲಿ ಪಾರ್ಕಿಂಗ್ ಶುಲ್ಕ ಸಂಗ್ರಹಿಸುವ ಪರವಾನಿಗೆ ನೀಡಲಾಗಿದೆಯೇ ಎಂದು ಕಲಮಾಸ್ಸೇರಿ ನಗರಸಭೆಗೆ ಕೋರ್ಟ್ ಪ್ರಶ್ನಿಸಿದೆ.
ಡಿಸೆಂಬರ್ 2 ರಂದು ಮಾಲ್ ಗೆ ಭೇಟಿ ನೀಡಿದ ನಟ ಪೌಲಿ ವಡಕ್ಕಣ್ ಅವರಿಗೆ ಪಾರ್ಕಿಂಗ್ ಶುಲ್ಕ ವಿಧಿಸಲಾಗಿತ್ತು. ಹಣ ಪಾವತಿಸದೇ ಹೊರ ಹೋಗಲು ಬಿಡುವುದಿಲ್ಲ ಎಂದು ಹೇಳಲಾಗಿತ್ತು. ಈ ಕುರಿತಾದ ಅರ್ಜಿಯ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್ ಮಾಲ್ ಗಳು ಪಾರ್ಕಿಂಗ್ ಸೌಲಭ್ಯ ಕಲ್ಪಿಸಬೇಕಿದೆ. ಶುಲ್ಕ ವಿಧಿಸುವಂತಿಲ್ಲ ಎಂದು ಹೇಳಿದೆ.
ಕಟ್ಟಡ ನಿರ್ಮಾಣದ ಸಂದರ್ಭದಲ್ಲಿ ನಿಯಮಗಳ ಅನುಸಾರ ಪಾರ್ಕಿಂಗ್ ಜಾಗ ನಿಗದಿ ಮಾಡಿ ಕಟ್ಟಡ ನಿರ್ಮಿಸಬೇಕು. ಆದರೆ, ಕಟ್ಟಡ ನಿರ್ಮಿಸಿದ ಬಳಿಕ ಪಾರ್ಕಿಂಗ್ ಗೆ ಮಾಲೀಕರು ಶುಲ್ಕ ವಿಧಿಸಬಹುದೇ ಎನ್ನುವುದು ಈಗಿರುವ ಪ್ರಶ್ನೆಯಾಗಿದೆ. ಮೇಲ್ನೋಟಕ್ಕೆ ಮಾಲ್ ಗಳಿಗೆ ಶುಲ್ಕ ವಿಧಿಸುವ ಯಾವುದೇ ಅಧಿಕಾರವಿಲ್ಲ ಎಂದು ಹೈಕೋರ್ಟ್ ಹೇಳಿದ್ದು, ಲುಲು ಮಾಲ್ ಗೆ ಪಾರ್ಕಿಂಗ್ ಶುಲ್ಕ ವಿಧಿಸಲು ಪರವಾನಿಗೆ ನೀಡಿದ್ದರೆ ಅದರ ಸಂಪೂರ್ಣ ಮಾಹಿತಿ ಒದಗಿಸಬೇಕೆಂದು ಕಲಮಾಸ್ಸೇರಿ ನಗರಸಭೆಗೆ ಆದೇಶ ನೀಡಿದೆ. ವಿಚಾರಣೆಯನ್ನು ಜನವರಿ 28ಕ್ಕೆ ಮುಂದೂಡಲಾಗಿದೆ.
ಲುಲು ಇಂಟರ್ನ್ಯಾಷನಲ್ ಶಾಪಿಂಗ್ ಮಾಲ್ ತನ್ನ ಗ್ರಾಹಕರಿಂದ ಪಾರ್ಕಿಂಗ್ ಶುಲ್ಕವನ್ನು ಸಂಗ್ರಹಿಸುವುದು ಕಾನೂನುಬಾಹಿರವಾಗಿದೆ ಎಂದು ಆರೋಪಿಸಿದ ಅರ್ಜಿಗಳ ಮೇಲೆ ತೀರ್ಪು ನೀಡುವಾಗ ಕೇರಳ ಹೈಕೋರ್ಟ್ ನ್ಯಾಯಮೂರ್ತಿ ಪಿ.ವಿ. ಕುಂಞಿಕೃಷ್ಣನ್ ಅವರು, ಶಾಪಿಂಗ್ ಮಾಲ್ ನಿಂದ ಪಾರ್ಕಿಂಗ್ ಶುಲ್ಕ ಸಂಗ್ರಹಿಸುವುದು ಸೂಕ್ತವಲ್ಲ ಎಂದು ಹೇಳಿದ್ದಾರೆ.
ಲುಲು ಮಾಲ್ ಯಾವುದೇ ಅಧಿಕಾರವಿಲ್ಲದೆ ಪಾರ್ಕಿಂಗ್ ಶುಲ್ಕ ವಸೂಲಿ ಮಾಡುತ್ತಿದೆ ಎಂಬುದು ಅರ್ಜಿದಾರರ ದೂರು ಆಗಿದ್ದು, ಹಿರಿಯ ವಕೀಲ ಎಸ್. ಶ್ರೀಕುಮಾರ್ ವಾದ ಮಂಡಿಸಿದರು. ಪ್ರತಿವಾದಿಗಳು ತಮ್ಮ ನಿಲುವನ್ನು ಬೆಂಬಲಿಸುವ ಹೈಕೋರ್ಟ್ ತೀರ್ಪುಗಳಿವೆ ಎಂದು ಹೇಳಿದರು. ಎರಡೂ ಕಡೆಯ ವಿಚಾರಣೆ ನಡೆಸಿದ ಬಳಿಕ ಕೋರ್ಟ್ ನಿರ್ದೇಶನ ನೀಡಿ ವಿಚಾರಣೆ ಮುಂದೂಡಿದೆ.