ಚೆನ್ನೈ: ಮಹತ್ವದ ಬೆಳವಣಿಯಲ್ಲಿ ಮದ್ರಾಸ್ ಹೈಕೋರ್ಟ್ ಎಲ್ಲ ಹೊಸ ವಾಹನಗಳಿಗೆ ಕಡ್ಡಾಯವಾಗಿ 5 ವರ್ಷಗಳ ವಿಮೆ ಕಡ್ಡಾಯವೆಂದು ನೀಡಿದ್ದ ಆದೇಶವನ್ನು ಹಿಂಪಡೆದಿದೆ.
ಬಂಪರ್-ಟು-ಬಂಪರ್ ವಿಮಾ ರಕ್ಷಣೆಯ ಮೇಲಿನ ತನ್ನ ಆದೇಶವನ್ನು ಮದ್ರಾಸ್ ಹೈಕೋರ್ಟ್ ಹಿಂಪಡೆದಿದ್ದು, ಇದು ಪ್ರಸ್ತುತ ಪರಿಸ್ಥಿತಿಯಲ್ಲಿ ಅನುಷ್ಠಾನಕ್ಕೆ ಸೂಕ್ತವಲ್ಲ ಎಂದು ಹೇಳಿದೆ.
ಜನರಲ್ ಇನ್ಶೂರೆನ್ಸ್ ಕೌನ್ಸಿಲ್ ಸಲ್ಲಿಸಿದ ಸ್ಪಷ್ಟೀಕರಣದ ಮನವಿಯ ಬಗ್ಗೆ ಮದ್ರಾಸ್ ಕೋರ್ಟ್ ವಿಚಾರಣೆ ನಡೆಸಿದೆ. ಕೌನ್ಸಿಲ್, ಇನ್ಶೂರೆನ್ಸ್ ರೆಗ್ಯುಲೇಟರಿ ಮತ್ತು ಡೆವಲಪ್‌ಮೆಂಟ್ ಅಥಾರಿಟಿ ಆಫ್ ಇಂಡಿಯಾ(ಐಆರ್‌ಡಿಎಐ), ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್(ಎಸ್‌ಐಎಎಂ) ಪ್ರತಿನಿಧಿಸುವ ವಕೀಲರು ನ್ಯಾಯಾಲಯಕ್ಕೆ ತಮ್ಮ ವಾದಗಳನ್ನು ಮಂಡಿಸಿದ್ದಾರೆ.
ನ್ಯಾಯಾಲಯ ಆಗಸ್ಟ್ 4, 2021 ರಂದು ಹೊರಡಿಸಿದ ಆದೇಶ ಅನಿರೀಕ್ಷಿತ ಪರಿಣಾಮ ಬೀರಿದೆ. ಸಮಾಜದ ಮೇಲೆ ತೀವ್ರ ಪರಿಣಾಮಗಳನ್ನು ಉಂಟುಮಾಡುತ್ತದೆ. ಹಾಗಾಗಿ ನೀಡಲಾದ ನಿರ್ದೇಶನ ಹಿಂಪಡೆಯಬಹುದು ಎಂದು ವಕೀಲರು ಮನವಿ ಸಲ್ಲಿಸಿದ್ದರು.
ವಿಮೆ ಮಾಡದವರು, ಖಾಸಗಿ ಕಾರ್ ನಲ್ಲಿ ಅನಪೇಕ್ಷಿತ ಪ್ರಯಾಣಿಕರು ಮತ್ತು ಸವಾರರ ರಕ್ಷಣೆಗೆ ಸಂಬಂಧಿಸಿದಂತೆ, ಸಂತ್ರಸ್ತರ ಹಿತಾಸಕ್ತಿಯನ್ನು ಕಾಪಾಡಲು IRDAI ಯೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದು ಹೇಳಲಾಗಿದೆ.
ಐಆರ್‌ಡಿಎಐನ ವಕೀಲರು, ವಿಮಾ ನಿಯಂತ್ರಕರು ಎಲ್ಲಾ ದುರದೃಷ್ಟಕರ ಸಂತ್ರಸ್ತರಿಗೆ ಉತ್ತಮ ಮತ್ತು ಪೂರ್ಣ ವಿಮಾ ರಕ್ಷಣೆ ನೀಡುವುದನ್ನು ಪರಿಗಣಿಸುತ್ತಾರೆ. ಅದು ಚಾಲಕರು, ಮಾಲೀಕರು ಅಥವಾ ಅನಪೇಕ್ಷಿತ ನಿವಾಸಿಗಳು ಅಥವಾ ಪಿಲಿಯನ್ ಸವಾರರು ಆಗಿರಬಹುದು ಎಂದು ಹೇಳಿದ್ದಾರೆ.
ಮನವಿ ಆಲಿಸಿದ ನ್ಯಾಯಾಲಯ, ಆಗಸ್ಟ್ 4, 2021 ರಂದು ನೀಡಲಾದ ನಿರ್ದೇಶನವು ಪ್ರಸ್ತುತ ಪರಿಸ್ಥಿತಿಯಲ್ಲಿ ಅನುಷ್ಠಾನಕ್ಕೆ ಸೂಕ್ತವಲ್ಲ ಎಂದು ಹೇಳಿದ್ದು, ಪ್ಯಾರಾಗ್ರಾಫ್ ನಂ .13 ರಲ್ಲಿ ಹೇಳಿದ ನಿರ್ದೇಶನವನ್ನು(4.8.2021 ರಂದು ಹೊರಡಿಸಿದ ಆದೇಶವನ್ನು) ಸದ್ಯಕ್ಕೆ ಹಿಂಪಡೆಯಲಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಮೋಟಾರು ಅಪಘಾತ ಪರಿಹಾರ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಾಲಯವು ಸೆಪ್ಟೆಂಬರ್ 1, 2021 ರಿಂದ ಮಾರಾಟವಾದ ಎಲ್ಲಾ ವಾಹನಗಳಿಗೆ 5 ವರ್ಷಗಳ ಕಡ್ಡಾಯ ಬಂಪರ್-ಟು-ಬಂಪರ್ ವಿಮಾ ರಕ್ಷಣೆಯ ಬಗ್ಗೆ ಆಗಸ್ಟ್ 4, 2021 ರಂದು ಆದೇಶ ನೀಡಿತ್ತು.