ಬೆಂಗಳೂರು: ಮರಳು ಕೊರತೆ ನೀಗಿಸುವ ಉದ್ದೇಶದಿಂದ ಮರಳು ನೀತಿಗೆ ತಿದ್ದುಪಡಿ ತರಲಾಗುವುದು. ಎಂ ಸ್ಯಾಂಡ್ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್ ಅವರು, ರಾಜ್ಯದಲ್ಲಿ ಮರಳಿನ ಕೊರತೆ ನೀಗಿಸಲು ಎಂ ಸ್ಯಾಂಡ್ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಲು ಸರ್ಕಾರ ಚಿಂತನೆ ನಡೆಸಿದೆ. ಇದಕ್ಕಾಗಿ ಮರಳು ನೀತಿಗೆ ತಿದ್ದುಪಡಿ ತರುವ ಉದ್ದೇಶವಿದೆ. ರಾಜ್ಯದಲ್ಲಿನ ಮರಳು ಬೇಡಿಕೆ ಪೂರೈಸಲು ಎಂ ಸ್ಯಾಂಡ್ ಅಗತ್ಯವಾಗಿದ್ದು, ಇದರಿಂದ ಮರಳು ಮಾಫಿಯಕ್ಕೆ ಕಡಿವಾಣ ಹಾಕಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಎಂ ಸ್ಯಾಂಡ್ ಉತ್ಪಾದನೆಗೆ ಉತ್ತೇಜನ ನೀಡಿದರೆ ಬೇಡಿಕೆ ಪೂರೈಸಲು ಸಾಧ್ಯವಾಗುತ್ತದೆ. ಅಕ್ರಮ ಜಲ್ಲಿ ಕ್ರಷರ್ ಗಳ ಹಾವಳಿ ನಿಯಂತ್ರಣವಾಗುತ್ತದೆ. ಕೆರೆ, ಹಳ್ಳ, ತೊರೆಗಳಲ್ಲಿ ಸಿಗುವ ಮರಳನ್ನು ಹಂಚಿಕೆ ಮಾಡಲು ಗ್ರಾಮ ಪಂಚಾಯಿತಿಗಳಿಗೆ ಅನುಮತಿ ನೀಡಲಾಗಿದೆ. 16 ಜಿಲ್ಲೆಗಳಿಗೆ ಕೆ.ಎಸ್.ಎಮ್.ಐ.ಎಲ್., 15 ಜಿಲ್ಲೆಗಳಿಗೆ ಹಟ್ಟಿ ಮೈನಿಂಗ್ ಮರಳು ಹಂಚಿಕೆ ಮಾಡಲು ಅನುಮತಿ ನೀಡಲಾಗಿದೆ. ವಾರ್ಷಿಕ 45 ಲಕ್ಷ ಟನ್ ಮರಳಿಗೆ ಬೇಡಿಕೆ ಇದೆ. ಎಂ ಸ್ಯಾಂಡ್ ನಿಂದ 35 ದಶ ಲಕ್ಷ ಟನ್ ಬೇಡಿಕೆ ಪೂರೈಕೆಯಾಗುತ್ತಿದೆ ಎಂದರು.
ಜನರಿಗೆ ಸುಲಭವಾಗಿ ಮರಳು ಸಿಗುವಂತೆ ಮಾಡಲು ಮುಂದಾಗಿದ್ದು, ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಲಾಗಿದೆ.
ಲಭ್ಯವಿರುವ ಮರಳನ್ನು ಯಾವುದೇ ಸಮಸ್ಯೆಯಾಗದಂತೆ ಮಾರಾಟ ಮಾಡಲಿದ್ದು, ಪ್ರತಿ ಟನ್ ಗೆ 800 ರೂಪಾಯಿ ನಿಗದಿ ಮಾಡಲಾಗಿದೆ. ಗ್ರಾಮೀಣ ಭಾಗದ ಹಳ್ಳ, ತೊರೆಗಳಲ್ಲಿ ಸಿಗುವ ಮರಳಿಗೆ ಟನ್ ಗೆ 300 ರೂ. ನಿಗದಿ ಮಾಡಲಾಗಿದೆ.