
ನವದೆಹಲಿ: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿದ್ದಾರೆ. ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಆಗುತ್ತಿರುವುದರಿಂದ ಜನಸಾಮಾನ್ಯರಿಗೆ ನುಂಗಲಾರದ ತುತ್ತಾಗಿದೆ. ಇದರೊಂದಿಗೆ ಅಡುಗೆ ಅನಿಲ ದರ ಕೂಡ ಹೆಚ್ಚಳವಾಗುತ್ತಿದೆ.
ಮುಂದಿನ ವಾರ ಮತ್ತೊಂದು ಮಹಾ ಆಘಾತ ಕಾದಿದೆ. ಜಾಗತಿಕ ಮಟ್ಟದಲ್ಲಿ ದರ ಏರಿಕೆಯ ಪರಿಣಾಮ ಪ್ರತಿ ಸಿಲಿಂಡರ್ ದರ ಭಾರಿ ದುಬಾರಿಯಾಗಲಿದೆ ಎಂದು ಹೇಳಲಾಗಿದೆ. ಜುಲೈನಿಂದ ಸಿಲಿಂಡರ್ ದರ 90 ರೂ.ಷ್ಟು ಹೆಚ್ಚಳವಾಗಿದೆ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರ ಏರಿಕೆಯ ಪರಿಣಾಮ ದೇಶದಲ್ಲಿ ಕಂಪನಿಗಳು ದರ ಪರಿಷ್ಕರಣೆ ಮಾಡಲಿವೆ. ಎಲ್ಪಿಜಿ ಮಾರಾಟದಲ್ಲಿ ಪ್ರತಿ ಸಿಲಿಂಡರ್ ಗೆ 100 ರೂಪಾಯಿಗಿಂತ ಹೆಚ್ಚು ನಷ್ಟವಾಗುತ್ತಿದೆ. ಇದರ ಪರಿಣಾಮ ನಷ್ಟ ಸರಿದೂಗಿಸಲು ಎಲ್ಪಿಜಿ ದರ ಮುಂದಿನವಾರ ಭಾರಿ ದುಬಾರಿಯಾಗುವ ಸಾಧ್ಯತೆ ಇದೆ.
ಜಾಗತಿಕ ಮಾನದಂಡವಾದ ಬ್ರೆಂಟ್ ಕಚ್ಚಾತೈಲ 85.42 ಡಾಲರ್ ನಷ್ಟು ಇದೆ. ಸರ್ಕಾರ ಎಲ್ಪಿಜಿ ಸಬ್ಸಿಡಿಯನ್ನೂ ಕೂಡ ತೆಗೆದುಹಾಕಿದ್ದು, ಈಗ ಮತ್ತೆ ಸಬ್ಸಿಡಿ ನೀಡುವ ಸಾಧ್ಯತೆ ಇಲ್ಲವೆನ್ನಲಾಗಿದೆ. ಇಂತಹ ಸಂದರ್ಭದಲ್ಲಿ ಎಲ್ಪಿಜಿ ಸಿಲಿಂಡರ್ ದರ ಬಲು ದುಬಾರಿಯಾಗಬಹುದು. ಪೆಟ್ರೋಲ್, ಡೀಸೆಲ್ ದರವೂ ಏರಿಕೆಯಾಗಲಿದೆ ಎಂದು ಹೇಳಲಾಗಿದೆ.