ಬಹುತೇಕ ಎಲ್ಲರ ಮನೆಯಲ್ಲೂ ಅಡುಗೆ ಸಿಲಿಂಡರ್ ಬಳಸಲಾಗ್ತಿದೆ. ಇದನ್ನು ಬಹಳ ಎಚ್ಚರಿಕೆಯಿಂದ ಬಳಸಬೇಕಾಗುತ್ತದೆ. ಸಣ್ಣ ತಪ್ಪು ದೊಡ್ಡ ಅಪಘಾತಕ್ಕೆ ಕಾರಣವಾಗಬಹುದು. ಎಲ್ಪಿಜಿ ಬಳಸುವಾಗ ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಮತ್ತು ಯಾವುದೇ ರೀತಿಯ ಅಪಘಾತದ ಸಂದರ್ಭದಲ್ಲಿ ಏನು ಮಾಡಬೇಕು ಎಂಬುದನ್ನು ಎಲ್ಲರೂ ತಿಳಿದುಕೊಳ್ಳುವುದು ಬಹಳ ಮುಖ್ಯ. ಅನಿಲ ಸೋರಿಕೆಯಿಂದಾಗಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡರೆ ಅಥವಾ ಅಪಘಾತ ಸಂಭವಿಸಿದಲ್ಲಿ ಗ್ರಾಹಕ ಏನು ಮಾಡಬೇಕು ಎಂಬುದನ್ನೂ ತಿಳಿದಿರಬೇಕು.
ಎಲ್ಪಿಜಿ ಸಂಪರ್ಕ ಪಡೆಯುವ ವೇಳೆ ಪೆಟ್ರೋಲಿಯಂ ಕಂಪನಿಗಳು ಗ್ರಾಹಕರಿಗೆ ವೈಯಕ್ತಿಕ ಅಪಘಾತದ ವಿಮೆ ಒದಗಿಸುತ್ತವೆ. ಅನಿಲ ಸೋರಿಕೆ ಅಥವಾ ಎಲ್‌ಪಿಜಿ ಸಿಲಿಂಡರ್ ಸ್ಫೋಟ ಸಂಭವಿಸಿದ ಸಂದರ್ಭದಲ್ಲಿ 50 ಲಕ್ಷ ರೂಪಾಯಿಗಳವರೆಗಿನ ಈ ವಿಮೆ ಸಿಗಲಿದೆ. ಈ ವಿಮೆಗಾಗಿ ಪೆಟ್ರೋಲಿಯಂ ಕಂಪನಿಗಳು ವಿಮಾ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿರುತ್ತವೆ. ಎಲ್‌ಪಿಜಿ ಸಿಲಿಂಡರ್‌ನಿಂದಾಗಿ ಪ್ರಾಣ ಮತ್ತು ಆಸ್ತಿಪಾಸ್ತಿ ನಷ್ಟಕ್ಕೆ 2 ಲಕ್ಷ ರೂಪಾಯಿಗಳ ವಿಮೆ ಸಿಗಲಿದೆ.
ಅಪಘಾತದಲ್ಲಿ 50 ಲಕ್ಷ ರೂಪಾಯಿವರೆಗೆ ಪರಿಹಾರ ಸಿಗಲಿದೆ. ಅಪಘಾತಕ್ಕೊಳಗಾದ ಪ್ರತಿ ವ್ಯಕ್ತಿಗೆ 10 ಲಕ್ಷ ರೂಪಾಯಿವರೆಗೆ ಸಿಗಲಿದೆ. ಅಪಘಾತವಾದ ತಕ್ಷಣ ಹತ್ತಿರದ ಪೊಲೀಸ್ ಠಾಣೆ ಹಾಗೂ ಎಲ್ಪಿಜಿ ವಿತರಕರಿಗೆ ಈ ಬಗ್ಗೆ ಮಾಹಿತಿ ನೀಡಬೇಕು. ಎಲ್ಪಿಜಿ ಒಬ್ಬ ವ್ಯಕ್ತಿ ಹೆಸರಿನಲ್ಲಿದ್ದು, ಉಳಿದವರಿಗೂ ಹಾನಿಯಾಗಿದ್ದರೆ ಅವರಿಗೂ ವಿಮೆ ಲಾಭ ಸಿಗಲಿದೆ. ಎಫ್ಐಆರ್ ದಾಖಲೆ, ವೈದ್ಯಕೀಯ ಬಿಲ್, ಮರಣ ಪ್ರಮಾಣ ಪತ್ರವನ್ನು ನೀಡಬೇಕು.