
ನವದೆಹಲಿ: ವಾಣಿಜ್ಯ ಎಲ್.ಪಿ.ಜಿ. ಸಿಲಿಂಡರ್ ಬೆಲೆ 25.5 ರೂಪಾಯಿ ಇಳಿಕೆಯಾಗಿದೆ. ಕಡಿಮೆಯಾದ ಹೊಸ ದರಗಳು ಇಂದಿನಿಂದ ಜಾರಿಗೆ ಬರಲಿವೆ.
ತೈಲ ಮಾರುಕಟ್ಟೆ ಕಂಪನಿಗಳು ತಕ್ಷಣದಿಂದಲೇ ಜಾರಿಗೆ ಬರುವಂತೆ ಪ್ರತಿ ಯೂನಿಟ್ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು 25.50 ರೂ.ಇಳಿಸಿವೆ. ಬೆಲೆಗಳಲ್ಲಿನ ಈ ಇತ್ತೀಚಿನ ಪರಿಷ್ಕರಣೆಯೊಂದಿಗೆ, 19 ಕೆಜಿಯ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ದೆಹಲಿಯಲ್ಲಿ 1,885 ರೂ. ಬದಲಿಗೆ 1,859 ರೂ.ಆಗಲಿದೆ.
ದೇಶೀಯ ಎಲ್‌ಪಿಜಿ ಬೆಲೆಗಳು ಏರಿಕೆಯಾಗಿ ಸಾಮಾನ್ಯ ಜನರಿಗೆ ಹೊರೆಯಾಗುತ್ತಿದೆ. ಅಡುಗೆ ಅನಿಲ ದರಗಳನ್ನು ಕಳೆದ ಐದು ವರ್ಷಗಳಲ್ಲಿ 58 ಬಾರಿ ಪರಿಷ್ಕರಿಸಲಾಗಿದೆ.
ಪೆಟ್ರೋಲಿಯಂ ಸಚಿವಾಲಯದ ಅಧಿಕೃತ ಮಾಹಿತಿಯ ಪ್ರಕಾರ, ಏಪ್ರಿಲ್ 1, 2017 ಮತ್ತು ಜುಲೈ 6, 2022 ರ ನಡುವೆ 58 ಮೇಲ್ಮುಖ ಪರಿಷ್ಕರಣೆಗಳ ಮೂಲಕ LPG ಬೆಲೆಗಳು ಶೇಕಡ 45 ರಷ್ಟು ಏರಿಕೆಯಾಗಿದೆ.
ಎಲ್‌ಪಿಜಿ ಸಿಲಿಂಡರ್‌ನ ಬೆಲೆ 2017ರ ಏಪ್ರಿಲ್‌ನಲ್ಲಿ 723 ರೂ.ಗೆ ಇತ್ತು ಮತ್ತು ಜುಲೈ 2022ರ ವೇಳೆಗೆ ಶೇ.45ರಷ್ಟು ಏರಿಕೆಯಾಗಿ 1,053 ರೂ.ಆಗಿದೆ.
ಎಲ್ಪಿಜಿ ಸಿಲಿಂಡರ್ ಬೆಲೆಗಳು ಮೌಲ್ಯವರ್ಧಿತ ತೆರಿಗೆ ಅಥವಾ ವ್ಯಾಟ್ ಮತ್ತು ಸಾರಿಗೆ ಶುಲ್ಕಗಳನ್ನು ಅವಲಂಬಿಸಿರುವುದರಿಂದ ಪ್ರತಿ ರಾಜ್ಯದಲ್ಲಿಯೂ ಭಿನ್ನವಾಗಿರುತ್ತವೆ.