ನವದೆಹಲಿ: ಎಲ್ಪಿಜಿ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ವಾಣಿಜ್ಯ ಬಳಕೆ ಸಿಲಿಂಡರ್ ದರ ಹೆಚ್ಚಳವಾದ ನಂತರ ಗೃಹ ಬಳಕೆ ಸಿಲಿಂಡರ್ ದರದಲ್ಲಿ ಏರಿಕೆಯಾಗಿದ್ದು, ಗ್ರಾಹಕರಿಗೆ ತೈಲ ಕಂಪನಿಗಳಿಂದ ಶಾಕ್ ನೀಡಲಾಗಿದೆ.
ಗೃಹಬಳಕೆಯ 14.2 ಕೆಜಿ ಎಲ್ಪಿಜಿ ಸಿಲಿಂಡರ್ ದರ 50 ರೂಪಾಯಿ ಹೆಚ್ಚಳವಾಗಿದೆ. 5 ಕೆಜಿ ಗೃಹ ಬಳಕೆ ಸಿಲಿಂಡರ್ ದರ 18 ರೂ. ಏರಿಕೆಯಾಗಿದ್ದು, ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ ದರ 36.50 ರೂ. ಯಷ್ಟು ಹೆಚ್ಚಳವಾಗಿದೆ.
ಈ ದರ ಹೆಚ್ಚಳದ ನಂತರ, ದೆಹಲಿಯಲ್ಲಿ ಸಬ್ಸಿಡಿ ರಹಿತ 14.2 ಕೆಜಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ 694 ರೂ.ಗೆ ಏರಿದೆ. ಈ ಮೊದಲು ಇದರ ಬೆಲೆ ಪ್ರತಿ ಸಿಲಿಂಡರ್ ಗೆ 644 ರೂ. ಇತ್ತು. 15 ದಿನಗಳಲ್ಲಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯಲ್ಲಿ ಎರಡನೇ ಬಾರಿಗೆ ಹೆಚ್ಚಳವಾಗಿದೆ. ಪರಿಷ್ಕರಣೆ ನಂತರ ಪ್ರತಿ ಸಿಲಿಂಡರ್ ದರ ಕೋಲ್ಕತ್ತಾದಲ್ಲಿ 720.50 ರೂ., ಮುಂಬೈಯಲ್ಲಿ 694 ರೂ.ಮತ್ತು ಚೆನ್ನೈನಲ್ಲಿ 710 ರೂ.ಗೆ ಹೆಚ್ಚಿಸಲಾಗಿದೆ ಎಂದು ಹೇಳಲಾಗಿದೆ.