ಕೊರೋನಾ ಕಾರಣದಿಂದಾಗಿ ಜನಸಾಮಾನ್ಯರ ಸ್ಥಿತಿ ಹೇಳತೀರದಾಗಿದೆ. ಮೊದಲೇ ಸಂಕಷ್ಟದಲ್ಲಿರುವ ಬಡವರು, ಮಧ್ಯಮವರ್ಗದವರು ಬೆಲೆ ಏರಿಕೆ ಬಿಸಿಯಿಂದ ಕಂಗಾಲಾಗಿದ್ದಾರೆ
ಸಂಕಷ್ಟದಲ್ಲಿರುವ ಜನರಿಗೆ ಗಾಯದ ಮೇಲೆ ಬರೆ ಎಳೆದಂತೆ ಅಡುಗೆ ಅನಿಲ ಸಿಲಿಂಡರ್ ದರ ಏರಿಕೆಯಾಗಿರುವುದು ನುಂಗಲಾರದ ತುತ್ತಾಗಿದೆ. ಪೆಟ್ರೋಲ್, ಡೀಸೆಲ್ ದರ ಗಗನಮುಖಿಯಾಗಿದೆ. ಏರುಗತಿಯಲ್ಲೇ ಸಾಗುತ್ತಿರುವ ಎಲ್.ಪಿ.ಜಿ. ದರ 1000 ಗಡಿ ದಾಟಲಿದೆ ಎಂದು ಹೇಳಲಾಗಿದೆ. ಚಳಿಗಾಲದಲ್ಲಿ ಎಲ್ಪಿಜಿಗೆ ಮತ್ತಷ್ಟು ಬೇಡಿಕೆ ಬರಲಿದೆ. ಯುರೋಪ್ ದೇಶಗಳಲ್ಲಿ ಚಳಿಗಾಲದಲ್ಲಿ ಎಲ್ಪಿಜಿಗೆ ಬೇಡಿಕೆ ಹೆಚ್ಚಾಗಲಿದೆ. ಹಾಗಾಗಿ, ಸಿಲಿಂಡರ್ ದರ ಇನ್ನಷ್ಟು ಏರಿಕೆಯಾಗುವುದು ನಿಶ್ಚಿತ. ಒಂದು ಸಿಲಿಂಡರ್ ಗೆ 1 ಸಾವಿರ ರೂ. ಗಡಿ ದಾಟುವುದು ನಿಶ್ಚಿತವೆನ್ನಲಾಗಿದೆ.
ಪೆಟ್ರೋಲ್ ಮತ್ತು ಡೀಸೆಲ್ ದರ ಕ್ರಮವಾಗಿ 120 ರೂ., 110 ರೂ. ವರೆಗೂ ಏರಿಕೆಯಾಗಬಹುದು. ಈಗಾಗಲೇ ಬಾಯಿ ಸುಡುತ್ತಿರುವ ಅಡುಗೆ ಎಣ್ಣೆ, ದಿನಸಿ, ತರಕಾರಿ ಸೇರಿ ಅಗತ್ಯ ವಸ್ತುಗಳ ದರ ಕೂಡ ಮತ್ತಷ್ಟು ಏರಿಕೆಯಾಗಲಿದೆ. ಡೀಸೆಲ್ ದರ ಏರಿಕೆಯಿಂದ ಸಾರಿಗೆ ವೆಚ್ಚ ದುಬಾರಿಯಾಗುತ್ತದೆ. ಸರಣಿ ಹಬ್ಬಗಳ ಹೊತ್ತಲ್ಲಿ ಅಗತ್ಯ ವಸ್ತು ಮತ್ತಷ್ಟು ದುಬಾರಿಯಾಗಲಿದೆ ಎನ್ನಲಾಗಿದೆ.
ಎಲ್ಪಿಜಿ ಸಿಲಿಂಡರ್ ದರ 1000 ರೂ. ಗಡಿ ದಾಟಲಿದೆ. ಮೂರು ತಿಂಗಳಲ್ಲಿ ಮತ್ತಷ್ಟು ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಸಿಲಿಂಡರ್ ಬೆಲೆ ಏರಿಕೆಯ ಬಗ್ಗೆ ಆಲ್ ಇಂಡಿಯಾ ಎಲ್ಪಿಜಿ ಫೆಡರೇಷನ್ ರಾಜ್ಯ ಕಾರ್ಯದರ್ಶಿ ರಮೇಶ್ ಕುಮಾರ್ ಸುಳಿವು ನೀಡಿದ್ದಾರೆ. ಚಳಿಗಾಲದಲ್ಲಿ ಎಲ್ಪಿಜಿ ಸಿಲಿಂಡರ್ ದರ ಮತ್ತಷ್ಟು ಹೆಚ್ಚಾಗುತ್ತದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಹೆಚ್ಚಾಗುವ ಹಿನ್ನೆಲೆಯಲ್ಲಿ ಭಾರತದಲ್ಲಿ ಎಲ್ಪಿಜಿ ಸಿಲಿಂಡರ್ ದರ ಹೆಚ್ಚಾಗಲಿದೆ ಎಂದು ಹೇಳಲಾಗಿದೆ.