ನವದೆಹಲಿ: ಕೇಂದ್ರ ಸರ್ಕಾರ ಗೃಹ ಬಳಕೆ ಸಿಲಿಂಡರ್ ದರವನ್ನು 200 ರೂಪಾಯಿ ಕಡಿಮೆ ಮಾಡಿದ್ದು, ಉಜ್ವಲ ಯೋಜನೆ ಫಲಾನುಭವಿಗಳಿಗೆ 400 ರೂ. ಕಡಿತವಾಗಲಿದೆ. ಇಂದಿನಿಂದಲೇ ಪರಿಷ್ಕೃತ ದರ ಜಾರಿಗೆ ಬಂದಿದೆ.
ಸಾಲು ಸಾಲು ಚುನಾವಣೆ, ಹಬ್ಬಗಳು ಮುಂದಿವೆ. ಇವೇ ಮೊದಲಾದ ಕಾರಣಗಳಿಂದ ಸಿಲಿಂಡರ್ ದರ ಕಡಿತಗೊಳಿಸಲಾಗಿದೆ. ಬೆಲೆ ಏರಿಕೆ ಜನಾಕ್ರೋಶವಾಗಿ ಮಾರ್ಪಟ್ಟು ಮುಖಭಂಗ ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.
ಈ ವರ್ಷಾಂತ್ಯಕ್ಕೆ ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಮಿಜೋರಾಂ ವಿಧಾನಸಭೆ ಚುನಾವಣೆ ನಡೆಯಲಿದೆ. ಮುಂದಿನ ವರ್ಷ ಮೊದಲಾರ್ಧದಲ್ಲಿ ಲೋಕಸಭೆ ಚುನಾವಣೆ ಹಾಗೂ ಸಿಕ್ಕಿಂ, ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಒಡಿಶಾ, ಹರಿಯಾಣ, ಮಹಾರಾಷ್ಟ್ರ ಜಾರ್ಖಂಡ್ ವಿಧಾನಸಭೆ ಚುನಾವಣೆ ನಡೆಯಲಿದೆ.
ಹೀಗಾಗಿ ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ ಮಾಡಿದ್ದು, ಪೆಟ್ರೋಲ್, ಡೀಸೆಲ್ ದರ ಇಳಿಕೆಗೂ ಸರ್ಕಾರ ಮುಂದಾಗುವ ಸಾಧ್ಯತೆ ಇದೆ. ಮುಂಬರುವ ಚುನಾವಣೆಗಳ ದೃಷ್ಟಿಯಿಂದ ಹಾಗೂ ನಾಗಾಲೋಟದಲ್ಲಿ ಮುಂದುವರೆದಿರುವ ಹಣದುಬ್ಬರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೆಟ್ರೋಲ್, ಡೀಸೆಲ್ ದರ ಇಳಿಕೆ ಮಾಡುವ ಸಾಧ್ಯತೆ ಇದೆ. ಈ ಮೂಲಕ ಸಾಮಾನ್ಯ ಜನರ ಜೀವನ ವೆಚ್ಚ ಕಡಿಮೆ ಮಾಡುವ ಉದ್ದೇಶವನ್ನು ಸರ್ಕಾರ ಹೊಂದಿದ್ದು, ಎಲ್.ಪಿ.ಜಿ. ಸಿಲಿಂಡರ್ ದರ ಇಳಿಕೆ ಮಾಡಿದಂತೆಯೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಡಿತಗೊಳಿಸುವ ಸಂಭವ ಇದೆ ಎನ್ನಲಾಗಿದೆ.