
ನವದೆಹಲಿ: ಕಳುವಾದ ಮೊಬೈಲ್ ಪತ್ತೆಗೆ ಮೇ 17 ರಿಂದ ಹೊಸ ತಂತ್ರಜ್ಞಾನ ಬಳಕೆ ಮಾಡಲಾಗುವುದು. ಫೋನ್ ಟ್ರಾಕಿಂಗ್ ತಂತ್ರಜ್ಞಾನ ಇದಾಗಿದ್ದು, ಕರ್ನಾಟಕದಲ್ಲಿ ಇದರ ಪ್ರಯೋಗ ಯಶಸ್ವಿಯಾಗಿದೆ.
ಕಳುವಾದ ಮೊಬೈಲ್ ಪತ್ತೆ ಮಾಡಿ ದುರ್ಬಳಕೆ ಆಗದಂತೆ ಬ್ಲಾಕ್ ಮಾಡುವ ತಂತ್ರಜ್ಞಾನ ಮೇ 17 ರಿಂದ ಜಾರಿಗೆ ಬರಲಿದೆ. ಸರ್ಕಾರ ಮೊಬೈಲ್ ಫೋನ್ ಟ್ರಾಕಿಂಗ್ ವ್ಯವಸ್ಥೆ ಲೋಕಾರ್ಪಣೆಗೊಳಿಸಲಿದ್ದು, ಈ ವ್ಯವಸ್ಥೆಯನ್ನು ಈಗಾಗಲೇ ದೆಹಲಿ, ಕರ್ನಾಟಕ, ಈಶಾನ್ಯ ಭಾರತದಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ. ದೇಶಾದ್ಯಂತ ಮೇ 17ರಂದು CEIR ಜಾರಿಗೆ ಬರಲಿದೆ.
ಟೆಲಿಮ್ಯಾಟಿಕ್ಸ್ ತಂತ್ರಜ್ಞಾನ ಅಭಿವೃದ್ಧಿ ಕೇಂದ್ರ ಕಳೆದು ಹೋದ ಮೊಬೈಲ್ ಟ್ರ್ಯಾಕ್ ಮಾಡಲು ಕ್ಲೋನ್ ಮಾಡಿದ ಮೊಬೈಲ್ ಗಳನ್ನು ಪತ್ತೆ ಮಾಡಲು ತಂತ್ರಜ್ಞಾನ ಅಭಿವೃದ್ಧಿಪಡಿಸಿದ್ದು, ಈ ಮೂಲಕ ಮೊಬೈಲ್ ಫೋನ್ ತಯಾರಿಸುವ ಕಂಪನಿಗಳು ಫೋನ್ ನಲ್ಲಿರುವ 15 ಅಂಕೆಗಳ IMEI ಸಂಖ್ಯೆ ದೂರ ಸಂಪರ್ಕ ಕಂಪನಿಗಳೊಂದಿಗೆ ಹಾಗೂ ಸಿಇಐಆರ್ ವ್ಯವಸ್ಥೆಯೊಂದಿಗೆ ಹಂಚಿಕೊಳ್ಳುವುದನ್ನು ಕಡ್ಡಾಯ ಮಾಡಲಾಗಿದ್ದು, ಇದರಿಂದ ಟೆಲಿಕಾಂ ಕಂಪನಿಗಳು ಹಾಗೂ ಸಿಇಐಆರ್ ವ್ಯವಸ್ಥೆಗೆ ಐಎಂಇಐ ನಂಬರ್ ಅದಕ್ಕೆ ಜೋಡಣೆಯಾದ ಮೊಬೈಲ್ ಅನ್ನು ಪತ್ತೆ ಮಾಡಲು ಸಾಧ್ಯವಾಗುತ್ತದೆ. ಕರ್ನಾಟಕದಲ್ಲಿ ಇದೆ ತಂತ್ರಜ್ಞಾನ ಬಳಸಿ 2500 ಕಳೆದು ಹೋದ ಮೊಬೈಲ್ ಪತ್ತೆ ಮಾಡಿ ಮಾಲೀಕರಿಗೆ ಮರಳಿಸಲಾಗಿದೆ. ಈಗ ದೇಶಾದ್ಯಂತ ಕಳೆದುಹೋದ ಮೊಬೈಲ್ ಫೋನ್ ಬ್ಲಾಕಿಂಗ್, ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಮೇ 17 ರಂದು ಹೊರತರಲಾಗುವುದು ಎಂದು ಹೇಳಲಾಗಿದೆ.