ಸಾಂಕ್ರಾಮಿಕ ರೋಗ, ಜನರು ಆರೋಗ್ಯ ವಿಮೆಯತ್ತ ಒಲವು ತೋರಿಸುವಂತೆ ಮಾಡಿದೆ. ವಿಮೆ ಪಾಲಿಸಿ ಖರೀದಿ ಮಾಡುವ ಮೊದಲು ಅನೇಕ ಸಂಗತಿಗಳನ್ನು ತಿಳಿದುಕೊಂಡಿರಬೇಕು. ಸರಿಯಾದ ಆರೋಗ್ಯ ವಿಮೆ ಪಾಲಿಸಿ ಖರೀದಿ ಮಾಡಿದಲ್ಲಿ ಮಾತ್ರ ಸಾಕಷ್ಟು ಪ್ರಯೋಜನಗಳನ್ನು ಪಡೆಯಬಹುದು.
ಮೊದಲನೆಯದಾಗಿ ವಿಮೆ ಪಾಲಿಸಿಯನ್ನು ಚಿಕ್ಕ ವಯಸ್ಸಿನಲ್ಲಿಯೇ ಖರೀದಿಸುವುದು ಒಳ್ಳೆಯ ಆಯ್ಕೆ. 30ನೇ ವಯಸ್ಸಿನಲ್ಲಿ ಖರೀದಿಸಿದ ಆರೋಗ್ಯ ವಿಮೆಯನ್ನು 50ನೇ ವಯಸ್ಸಿನಲ್ಲಿ ಖರೀದಿಸಿದಾಗ ಹೆಚ್ಚು ವೆಚ್ಚ ಬರುತ್ತದೆ. ಚಿಕ್ಕ ವಯಸ್ಸಿನಲ್ಲಿಯೇ ವಿಮೆ ಖರೀದಿ ಮಾಡುವುದ್ರಿಂದ ಪ್ರೀಮಿಯಂ ಹೊಣೆ ಕಡಿಮೆಯಾಗುತ್ತದೆ. ಚಿಕ್ಕ ವಯಸ್ಸಿನಲ್ಲಿಯೇ ಆರೋಗ್ಯ ವಿಮೆ ಖರೀದಿ ಮಾಡುವುದ್ರಿಂದ ವಯಸ್ಸಾದಂತೆ ಹೆಚ್ಚಾಗುವ ಖಾಯಿಲೆಗಳ ಖರ್ಚಿಗೆ ನೆರವಾಗುತ್ತದೆ. ಖಾಯಿಲೆ ಕಾಡಿದ ಮೇಲೆ ವಿಮೆ ಖರೀದಿಗೆ ಆಲೋಚನೆ ಮಾಡುವ ಬದಲು ಮೊದಲೇ ಇದಕ್ಕೆ ಸಿದ್ಧರಾಗಿದ್ದರೆ ಒಳ್ಳೆಯದು.
ಆರೋಗ್ಯ ವಿಮಾ ಪಾಲಿಸಿಯನ್ನು ಆಯ್ಕೆಮಾಡುವಾಗ ಅವಶ್ಯಕತೆಯನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ. ಸರಿಯಾದ ಪಾಲಿಸಿ ಆಯ್ಕೆ ಮಾಡಲು ನಿಮಗೆ ಸಹಾಯವಾಗುತ್ತದೆ. ಗ್ರೂಪ್ ಮೆಡಿಕಲ್ ಕವರ್ ಹೊಂದಿದ್ದರೆ, ಅದು ನಿಮಗೆ ಸಾಕಾಗುತ್ತದೆಯೇ ಎಂಬುದನ್ನು ನೋಡಿ. ವೈಯಕ್ತಿಕ ನೀತಿಯ ಖರೀದಿ ಅವಶ್ಯಕತೆಯಿದೆಯೇ ಎಂಬುದನ್ನು ಆಲೋಚಿಸಿ. ಪಾಲಿಸಿ ಆಯ್ಕೆಯಲ್ಲಿ ಗೊಂದಲವಿದ್ದರೆ ಮಾರ್ಗದರ್ಶಕರ ಸಲಹೆ ಪಡೆಯಿರಿ.
ವಿಮೆ ಪಾಲಿಸಿ ಖರೀದಿಸುವ ಮೊದಲು ವಿಮೆ ಕಂಪನಿಗಳ ಹಿನ್ನಲೆಯನ್ನು ಪರಿಶೀಲಿಸಬೇಕಾಗುತ್ತದೆ. ಯಾವ ಆಸ್ಪತ್ರೆಗಳು ಕಂಪನಿ ಪಾಲಿಸಿಯಡಿ ಬರಲಿವೆ, ಡಿಜಿಟಲ್ ವ್ಯವಹಾರ ಹೇಗಿದೆ ಎಂಬುದನ್ನು ನೀವು ತಿಳಿಯಬೇಕಾಗುತ್ತದೆ. ಒಂದೇ ಕಂಪನಿಯನ್ನು ಅವಲಂಬಿಸಬೇಡಿ. ಬೇರೆ ಬೇರೆ ವಿಮೆ ಕಂಪನಿಗಳ ನೀತಿ, ಸೇವೆ, ಅವು ಕೊಡುವ ಕೊಡುಗೆಗಳನ್ನು ಪರಿಶೀಲಿಸಿ ನಂತ್ರ ಆಯ್ಕೆ ಮಾಡಿಕೊಳ್ಳಿ.
ಕಂಪನಿ ನೀತಿ, ನಿಯಮಗಳು, ಷರತ್ತುಗಳ ಬಗ್ಗೆ ತಿಳಿದಿರಬೇಕು. ಪಾಲಿಸಿಯಲ್ಲಿರುವ ಷರತ್ತುಗಳನ್ನು ಸರಿಯಾಗಿ ಓದಿ ನಂತ್ರ ಆಯ್ಕೆ ಮಾಡಿಕೊಳ್ಳಿ. ವೇಟಿಂಗ್ ಪಿರಿಯಡ್, ಖಾಯಿಲೆಗಳ ವ್ಯಾಪ್ತಿ ಸೇರಿದಂತೆ ಎಲ್ಲ ಷರತ್ತುಗಳನ್ನು ತಿಳಿದಿರಬೇಕು.