ನವದೆಹಲಿ: ಲಾಕ್ ಡೌನ್ ಸಂದರ್ಭದಲ್ಲಿ ಮುಂದೂಡಲಾಗಿದ್ದ ಸಾಲದ ಕಂತುಗಳ(ಇಎಂಐ) ಮೇಲಿನ ಬಡ್ಡಿ ಮನ್ನಾ ಮಾಡುವ ಸಂಬಂಧ ತಜ್ಞರ ಸಮಿತಿ ಪರಾಮರ್ಶೆ ನಡೆಸಲಿದೆ.
ಕೇಂದ್ರ ಹಣಕಾಸು ಖಾತೆ ಸಹಾಯಕ ಸಚಿವ ಅನುರಾಗ್ ಠಾಕೂರ್ ಲೋಕಸಭೆಗೆ ಈ ಕುರಿತಾಗಿ ಮಾಹಿತಿ ನೀಡಿದ್ದು ಇದು ಇಎಂಐ ಬಡ್ಡಿ ಪಾವತಿಸದವರಿಗೆ ಬಡ್ಡಿ ಮನ್ನಾ ನಿರೀಕ್ಷೆ ಭರವಸೆ ಮೂಡಿಸಿದೆ.
ಕೊರೋನಾ ಲಾಕ್ಡೌನ್ ಕಾರಣದಿಂದ ಇಎಂಐ ಪಾವತಿಗೆ 6 ತಿಂಗಳು ಕಾಲಾವಕಾಶ ಕಲ್ಪಿಸಿದ ಬ್ಯಾಂಕುಗಳು ಈ ಅವಧಿಯಲ್ಲಿ ಸಾಲದ ಕಂತುಗಳಿಗೆ ಬಡ್ಡಿ ವಿಧಿಸಿವೆ. ಬಡ್ಡಿಯನ್ನು ಮನ್ನಾ ಮಾಡಬೇಕೆಂಬ ಒತ್ತಾಯ ಕೇಳಿಬಂದಿದೆ. ಸುಪ್ರೀಂಕೋರ್ಟ್ ಕೂಡ ಕೇಂದ್ರ ಸರ್ಕಾರ, ಆರ್.ಬಿ.ಐ.ಗಳಿಗೆ ಬಡ್ಡಿ ಮನ್ನಾ ಬಗ್ಗೆ ನಿರ್ಧಾರ ತಿಳಿಸುವಂತೆ ಹೇಳಿದೆ.
ಗೃಹ, ವಾಹನ ಮೊದಲಾದ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಬೇಕೆಂಬ ಒತ್ತಾಯ ತೀವ್ರಗೊಂಡ ಹಿನ್ನೆಲೆಯಲ್ಲಿ ತಜ್ಞರ ಸಮಿತಿ ಈ ಕುರಿತಾಗಿ ಪರಾಮರ್ಶೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಿದೆ ಎಂದು ಹೇಳಲಾಗಿದೆ.