ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಾಳೆ ಮಹತ್ವದ ಸಭೆ ನಡೆಯಲಿದ್ದು, ಅಂತರರಾಷ್ಟ್ರೀಯ ವಿಮಾನ ಹಾರಾಟಕ್ಕೆ ಗ್ರೀನ್ ಸಿಗ್ನಲ್ ನೀಡುವ ಬಗ್ಗೆ ಚರ್ಚೆ ನಡೆಯಲಿದೆ.
ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಮೋದಿ ಸಮಾಲೋಚನೆ ನಡೆಸಲಿದ್ದಾರೆ. ಪ್ರಧಾನಿ ಜೊತೆಗಿನ ಸಭೆಯಲ್ಲಿ ವಿಶೇಷ ಬೇಡಿಕೆಗಳನ್ನು ಈಡೇರಿಸಲು, ಹೊಸ ಪ್ಯಾಕೇಜ್ ನೀಡಲು ಮುಖ್ಯಮಂತ್ರಿಗಳು ಮನವಿ ಮಾಡುವ ಸಾಧ್ಯತೆ ಇದೆ.
ಕೇಂದ್ರದ ನಿರ್ದೇಶನಗಳನ್ನು ಯಥಾವತ್ತಾಗಿ ಪಾಲನೆ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಸಿನಿಮಾ ಥಿಯೇಟರ್, ಮಲ್ಟಿಪ್ಲೆಕ್ಸ್, ಜಿಮ್, ಈಜುಕೊಳ ಮಾಲ್ ಗಳನ್ನು ತೆರೆಯುವ ವಿಚಾರದಲ್ಲಿ ರಾಜ್ಯ ಸರ್ಕಾರ ಸ್ವತಂತ್ರ ನಿರ್ಧಾರ ಕೈಗೊಂಡಿಲ್ಲ. ಸಿನಿಮಾ ಕ್ಷೇತ್ರಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವ ಉದ್ದೇಶವಿಲ್ಲ. ಘೋಷಿತ ಪ್ಯಾಕೇಜ್ ಗಳಿಗೆ ಹಣ ಹೊಂದಿಸಲು ಕಷ್ಟವಾಗಿದೆ. ಹೀಗಿರುವಾಗ ಸಿನಿಮಾ ಕ್ಷೇತ್ರಕ್ಕೆ ವಿಶೇಷ ಪ್ಯಾಕೇಜ್ ನೀಡುವುದಕ್ಕೆ ಆರ್ಥಿಕ ಇಲಾಖೆ ಸಮ್ಮತಿ ಸೂಚಿಸುವ ಸಾಧ್ಯತೆ ಇಲ್ಲವೆನ್ನಲಾಗಿದೆ.
ಕೇಂದ್ರ ಸರ್ಕಾರ ಆರ್ಥಿಕ ನೆರವು ನೀಡಿಲ್ಲ. ಲಾಕ್ ಡೌನ್ ಮಾಡಿದ್ರೆ ಆರ್ಥಿಕತೆಗೆ ಪೆಟ್ಟು ಬೀಳಲಿದೆ. ಈ ಕಾರಣಕ್ಕೆ ಸಿಎಂ ಮತ್ತೆ ಲಾಕ್ ಡೌನ್ ಮಾಡದೇ ಕೊರೋನಾ ನಿಯಂತ್ರಿಸಲು ಪರಿಣಾಮಕಾರಿ ಕ್ರಮಕೈಗೊಳ್ಳಲು ತಿಳಿಸಿದ್ದಾರೆ. ಪ್ರಧಾನಿ ಮೋದಿ ಜೊತೆಗಿನ ಸಭೆಯ ನಂತರ ಆರ್ಥಿಕ ಚಟುವಟಿಕೆ ಪುನಾರಂಭಕ್ಕೆ ಒತ್ತು ನೀಡಲಿದ್ದು, ಅನ್ ಲಾಕ್ ಮುಂದುವರೆದ ಭಾಗವಾಗಿ ಸಿನಿಮಾ ಥಿಯೇಟರ್, ಮಲ್ಟಿಪ್ಲೆಕ್ಸ್, ಜಿಮ್, ಈಜುಕೊಳ ಮಾಲ್ ಗಳನ್ನು ತೆರೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.