ಕೋಲಾರ: ಸ್ತ್ರೀಶಕ್ತಿ ಸಂಘಗಳ ಸಾಲ ವಸೂಲಾತಿಗೆ ತಾತ್ಕಾಲಿಕ ತಡೆ ನೀಡಲಾಗಿದೆ. ಸ್ತ್ರೀಶಕ್ತಿ ಸಂಘಗಳ ಸಾಲ ವಸೂಲಿಗೆ ಯಾರೂ ಮುಂದಾಗಬಾರದು, ತಾತ್ಕಾಲಿಕವಾಗಿ ಸಾಲ ವಸೂಲಾತಿ ಮುಂದೂಡಬೇಕು ಎಂದು ಸಹಕಾರ ಸಂಘಗಳ ಉಪನಿಬಂಧಕರು ಪತ್ರ ಮುಖೇನ ಸಹಕಾರ ಸಂಘಗಳಿಗೆ ಸೂಚನೆ ನೀಡಿದ್ದಾರೆ.
ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಸಾಲ ವಿತರಿಸಲಾಗಿದ್ದು, ಈ ಸಾಲದ ವಸೂಲಾತಿ ಪ್ರಕ್ರಿಯೆಯನ್ನು ಮುಂದಿನ ಆದೇಶದವರೆಗೂ ಕೈಗೊಳ್ಳದಂತೆ ಸಹಕಾರ ಅಭಿವೃದ್ಧಿ ಅಧಿಕಾರಿಗಳು ಮತ್ತು ಸಹಕಾರ ಸಂಘಗಳ ನಿರೀಕ್ಷಕರಿಗೆ ಸೂಚನೆ ನೀಡಲಾಗಿದೆ.
ನೇರ ಸಾಲ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಪಡೆದ ಸಾಲ ಮರುಪಾವತಿಸುವುದಿಲ್ಲ ಎಂದು ಮಹಿಳಾ ಸಂಘಗಳ ಸದಸ್ಯರು ಗಲಾಟೆ ಮಾಡಿದ್ದಾರೆ. ಕೆಲವು ಕಡೆ ಅಹಿತಕರ ಘಟನೆಗಳು ಕೂಡ ನಡೆದಿವೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಎಸ್ಪಿ ಎಂ. ನಾರಾಯಣ ನಿರ್ದೇಶನ ನೀಡಿದ್ದಾರೆ. ಸಹಕಾರ ಸಂಘಗಳ ಉಪನಿಬಂಧಕರು, ಸ್ತ್ರೀಶಕ್ತಿ ಸಂಘಗಳ ಸಾಲ ವಸೂಲಿಗೆ ಯಾರೂ ಮುಂದಾಗಬಾರದು. ತಾತ್ಕಾಲಿಕವಾಗಿ ಮುಂದೂಡಬೇಕೆಂದು ಹೇಳಿದ್ದಾರೆ.