ನವದೆಹಲಿ: ಪ್ರಧಾನಮಂತ್ರಿ ಸ್ವನಿಧಿ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳಿಗೆ 10 ಸಾವಿರ ರೂ. ಸಾಲ ನೀಡಲಾಗುವುದು.
ಪ್ರಧಾನಿ ನರೇಂದ್ರ ಮೋದಿ ಯೋಜನೆಯ ಅನುಷ್ಠಾನ ಪ್ರಗತಿ ಪರಿಶೀಲನೆ ನಡೆಸಿದ್ದು, ಬೀದಿ ಬದಿ ವ್ಯಾಪಾರಿಗಳು ಹೆಚ್ಚಾಗಿ ಡಿಜಿಟಲ್ ವಹಿವಾಟು ನಡೆಸುವಂತೆ ಉತ್ತೇಜನ ನೀಡಬೇಕು ಎಂದು ತಿಳಿಸಿದ್ದಾರೆ.
ಕಚ್ಚಾವಸ್ತುಗಳ ಸಂಗ್ರಹದಿಂದ ಮಾರಾಟದವರೆಗೆ ಎಲ್ಲವೂ ಡಿಜಿಟಲ್ ವಹಿವಾಟು ನಡೆಸುವಂತೆ ಉತ್ತೇಜನ ನೀಡಬೇಕು. ಇದಕ್ಕಾಗಿ ಸೂಕ್ತ ಪ್ರೋತ್ಸಾಹ ಮತ್ತು ತರಬೇತಿ ನೀಡುವಂತೆ ತಿಳಿಸಿದ್ದು, ಇದರಿಂದ ಬೀದಿ ಬದಿ ವ್ಯಾಪಾರಿಗಳಿಗೆ ಭವಿಷ್ಯದ ಹಣಕಾಸು ಅಗತ್ಯಗಳಿಗೆ ಸಹಾಯ ಮಾಡುವ ಕ್ರೆಡಿಟ್ ಪ್ರೊಪೈಲ್ ನಿರ್ಮಿಸಲು ಸಹಾಯವಾಗುತ್ತದೆ ಎಂದು ಹೇಳಿದ್ದಾರೆ.
ಯಾವುದೇ ಆಧಾರವಿಲ್ಲದೇ ಒಂದು ವರ್ಷದವರೆಗೆ 10 ಸಾವಿರ ರೂಪಾಯಿವರೆಗೆ ಮೂಲ ಬಂಡವಾಳ ಸಾಲವನ್ನು 50 ಲಕ್ಷ ಬೀದಿ ಬದಿ ವ್ಯಾಪಾರಿಗಳಿಗೆ ನೀಡಲು ಯೋಜನೆ ರೂಪಿಸಲಾಗಿದೆ. ಇದುವರೆಗೆ 2.6 ಲಕ್ಷಕ್ಕೂ ಹೆಚ್ಚು ಅರ್ಜಿ ಸ್ವೀಕರಿಸಿ 64,000 ಅರ್ಜಿಗಳಿಗೆ ಮಂಜೂರಾತಿ ನೀಡಲಾಗಿದೆ.