ನವದೆಹಲಿ: ಕೊರೋನಾ ಸೋಂಕು ತಡೆಗೆ ಲಾಕ್ ಡೌನ್ ಜಾರಿ ಮಾಡಿದ ಸಂದರ್ಭದಲ್ಲಿ ಸಾಲದ ಕಂತು ಪಾವತಿಗೆ ವಿನಾಯಿತಿ ನೀಡಲಾಗಿತ್ತು. ಈ ಮೊರಾಟೋರಿಯಂ ಅವಧಿಯ ಎಲ್ಲಾ ಸಾಲಗಳ ಮೇಲಿನ ಬಡ್ಡಿಯನ್ನು ಮನ್ನಾ ಮಾಡಲು ಅಸಾಧ್ಯವೆಂದು ಕೇಂದ್ರ ಸರ್ಕಾರ ಹೇಳಿದೆ.
ಸುಪ್ರೀಂಕೋರ್ಟ್ಗೆ ಈ ಕುರಿತಾಗಿ ಕೇಂದ್ರ ಸರ್ಕಾರದಿಂದ ಮಾಹಿತಿ ನೀಡಲಾಗಿದ್ದು, ಈಗ ಬಡ್ಡಿ ಮನ್ನಾ ಮಾಡಿದರೆ ಬ್ಯಾಂಕ್, ಹಣಕಾಸು ಸಂಸ್ಥೆಗಳಿಗೆ 6 ಲಕ್ಷ ಕೋಟಿ ರೂಪಾಯಿಯಷ್ಟು ನಷ್ಟವಾಗಲಿದೆ. ಬ್ಯಾಂಕಿಂಗ್ ವ್ಯವಸ್ಥೆ ಕುಸಿದು ಬೀಳುತ್ತದೆ ಎಂದು ತಿಳಿಸಲಾಗಿದೆ.
ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಡಿಸೆಂಬರ್ 14 ಕ್ಕೆ ಮುಂದೂಡಿದೆ. 6 ತಿಂಗಳ ಮೊರಾಟೋರಿಯಂ ಅವಧಿಯಲ್ಲಿನ ಚಕ್ರ ಬಡ್ಡಿಯನ್ನು ಸರ್ಕಾರ ಮನ್ನಾ ಮಾಡಿದೆ. ಈಗ ಬಡ್ಡಿ ಮನ್ನಾ ಮಾಡುವುದರಿಂದ ಬ್ಯಾಂಕುಗಳ ಮೇಲೆ ಒತ್ತಡ ಬೀಳುತ್ತದೆ. ಕೋವಿಡ್ ನಿಂದಾಗಿ ಆರ್ಥಿಕ ಬಿಕ್ಕಟ್ಟು ಉಂಟಾಗಿದೆ. ಸರ್ಕಾರದ ಕಾರ್ಯಕ್ರಮಗಳಿಗೆ ತೊಡಕಾಗುತ್ತದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದ್ದು. ದೇಶದ ಆರ್ಥಿಕ ದೃಷ್ಟಿಯಿಂದ ಬಡ್ಡಿ ಮನ್ನಾ ಮಾಡುವುದು ಸೂಕ್ತವಲ್ಲ ಎಂದು ತಿಳಿಸಿದ್ದಾರೆ.