ಹಾಸನ: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮ ಹಾಸನ ಇವರ ವತಿಯಿಂದ ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ಖ್, ಪಾರ್ಸಿ ಹಾಗೂ ಆಂಗ್ಲೋ ಇಂಡಿಯನ್ ಜನಾಂಗದವರಿಗೆ 2020-21ನೇ ಸಾಲಿನಲ್ಲಿ ವಿವಿಧ ಯೋಜನೆಗಳಡಿಯಲ್ಲಿ ನಿಗಮದಿಂದ ಸಾಲ ಹಾಗೂ ಸಹಾಯಧನ ಸೌಲಭ್ಯಗಳನ್ನು ನೀಡಲು ಆನ್‍ಲೈನ್ ಮುಖೇನ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ವೃತ್ತಿ ಪ್ರೋತ್ಸಾಹ ಯೋಜನೆ(ಪರಿಷ್ಕೃತ)ಯಡಿ 1,00,000 ರೂ. ಗಳಿಗೆ ಶೇ.50 ರಷ್ಟು ಸಾಲ ಹಾಗೂ ಶೇ.50 ರಷ್ಟು ಸಹಾಯಧನವನ್ನು ನಿಗಮದಿಂದ ನೇರವಾಗಿ ನೀಡಲಾಗುತ್ತದೆ. ಗಂಗಾ ಕಲ್ಯಾಣ ನೀರಾವರಿ ಯೋಜನೆಯಡಿಯಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ 1 ರಿಂದ 5 ಎಕರೆ ಒಳಗಿರುವ ಖುಷ್ಕಿ ಜಮೀನಿನಲ್ಲಿ ಘಟಕ ವೆಚ್ಚ 2 ಲಕ್ಷಗಳಲ್ಲಿ ಕೊಳವೆ ಬಾವಿಗಳನ್ನು ಕೊರೆಯಿಸಿ ಕೊಡುವ ಮುಖೇನ ನೀರಾವರಿ ಸೌಲಭ್ಯವನ್ನು ಒದಗಿಸಲಾಗುತ್ತಿದೆ.
ಶ್ರಮಶಕ್ತಿ ಸಾಲ ಹಾಗೂ ಸಹಾಯಧನ ಯೋಜನೆಯಡಿಯಲ್ಲಿ ಸಾಂಪ್ರದಾಯಿಕ ವೃತ್ತಿ ಕುಲಕಸುಬುದಾರರಿಗೆ ಕುಲಕಸುಬುಗಳನ್ನು ಕೈಗೊಳ್ಳಲು ನಿಗಮದಿಂದ 25,000 ರೂ. ಹಾಗೂ 50,000 ರೂ. ಗಳಿಗೆ ಶೇ.50 ರಷ್ಟು ಸಾಲ ಹಾಗೂ ಶೇ.50 ರಷ್ಟು ಸಹಾಯಧನವನ್ನು ಕಲ್ಪಿಸಲಾಗುತ್ತದೆ.
ಮೈಕ್ರೋಲೋನ್ ಯೋಜನೆ (ಸ್ವ ಸಹಾಯ ಸಂಘದ ಸದಸ್ಯರಿಗೆ) ಈ ಯೋಜನೆಯಡಿಯಲ್ಲಿ ಸ್ವ ಸಹಾಯ ಸಂಘದ ಪ್ರತಿ ಸದಸ್ಯರಿಗೆ 10,000 ರೂ. ಗಳನ್ನು ನೀಡಲಾಗುವುದು. ಈ ಯೋಜನೆಯಡಿ 5,000 ರೂ. ಗಳ ಸಾಲ ಹಾಗೂ 5,000 ರೂ. ಗಳ ಸಹಾಯಧನವಾಗಿರುತ್ತದೆ.
ಗೃಹ ನಿರ್ಮಾಣ ಮೇಲಿನ ಮಾರ್ಜಿನ್ ಹಣ ಸಾಲ ಯೋಜನೆಯಡಿ ಸರ್ಕಾರಿ ಸ್ವಾಮ್ಯದ ಗೃಹ ನಿರ್ಮಾಣ ಸಂಸ್ಥೆಗಳ ಸಾಲ ಸೌಲಭ್ಯ ಪಡೆದಿರುವ ಫಲಾನುಭವಿಗಳಿಗೆ ಶೇ.4 ರ ಬಡ್ಡಿ ದರದಲ್ಲಿ ಗರಿಷ್ಠ 1 ಲಕ್ಷದವರೆಗೆ ಮಾರ್ಜಿನ್ ಹಣ ಸಾಲ ಸೌಲಭ್ಯ ನೀಡಲಾಗುವುದು (ಸಾಲದ ಹಣವನ್ನು ಗೃಹ ನಿರ್ಮಾಣ ಸಂಸ್ಥೆಗಳ ಮುಖೇನ ಬಿಡುಗಡೆ ಮಾಡಲಾಗುವುದು).
ಪಶು ಸಂಗೋಪನಾ ಯೋಜನೆ(ಗ್ರಾಮೀಣ ಪ್ರದೇಶದ ಮಹಿಳೆಯರಿಗೆ) ಈ ಯೋಜನೆಯಡಿ ಹಸು, ಕೋಳಿ, ಕುರಿ ಸಾಕಾಣಿಕೆ ಮುಂತಾದ ಕೃಷಿ ಸಂಬಂಧಿತ ಚಟುವಟಿಕೆಗಳನ್ನು ಕೈಗೊಳ್ಳುವ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ 40,000 ರೂ. ಘಟಕ ವೆಚ್ಚದಲ್ಲಿ ಶೇ.50 ರಷ್ಟು ಸಾಲ ಹಾಗೂ ಶೇ.50 ರಷ್ಟು ಸಹಾಯಧನ ನೀಡಲಾಗುವುದು.
ಟ್ಯಾಕ್ಸಿ/ಗೂಡ್ಸ್ ವಾಹನ ಖರೀದಿ ಸಹಾಯಧನ ಯೋಜನೆಯಡಿ ಟ್ಯಾಕ್ಸಿ/ಗೂಡ್ಸ್ ವಾಹನವನ್ನು ಖರೀದಿಸಲು ರಾಷ್ಟೀಕೃತ ಬ್ಯಾಂಕ್‍ಗಳ ಸಹಯೋಗದೊಂದಿಗೆ ಫಲಾನುಭವಿಗಳಿಗೆ 75000 ರೂ.ಗಳ ಸಹಾಯಧನವನ್ನು ನೀಡಲಾಗುವುದು. ಈ ಯೋಜನೆಯಡಿ ಖರೀದಿಸುವ ವಾಹನದ ಮೌಲ್ಯ ಕನಿಷ್ಠ ರೂ.4 ಲಕ್ಷಗಳಿಂದ 7.50 ಲಕ್ಷಗಳಾಗಿರತಕ್ಕದ್ದು(ತೆರಿಗೆ ಹೊರತುಪಡಿಸಿ).
ಅಲ್ಪಸಂಖ್ಯಾತರ ರೈತರ ಕಲ್ಯಾಣ ಯೋಜನೆಯಡಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಸಣ್ಣ ಟ್ರ್ಯಾಕ್ಟರ್, ಪವರ್ ಟಿಲ್ಲರ್, ಭೂಮಿ ಸಿದ್ದತೆ ಉಪಕರಣ, ನಾಟಿ ಬಿತ್ತನೆ ಉಪಕರಣ, ಅಂತರ ಬೇಸಾಯ ಉಪಕರಣಗಳು ಇತ್ಯಾದಿ ಕೃಷಿ ಯಂತ್ರೋಪಕರಣಗಳನ್ನು ಖರೀದಿಸಲು 1 ಲಕ್ಷ ರೂ. ಘಟಕ ವೆಚ್ಚದಲ್ಲಿ ಸಾಲ ಹಾಗೂ ಸಹಾಯಧನವನ್ನು ನೇರವಾಗಿ ನೀಡಲಾಗುವುದು(50,000 ರೂ. ಸಾಲ ಹಾಗೂ 50,000 ರೂ.ಗಳು ಸಹಾಯಧನವಾಗಿರುತ್ತದೆ).
ಆಟೋಮೊಬೈಲ್ ಸರ್ವೀಸ್ ತರಬೇತಿ ಹಾಗೂ ಸಾಲ ಯೋಜನೆಯಡಿಯಲ್ಲಿ ನಿರುದ್ಯೋಗ ಯುವಕ/ಯುವತಿಯರಿಗೆ ನಿಗಮದಿಂದ ಆಟೋಮೊಬೈಲ್ ಸರ್ವೀಸ್ ತರಬೇತಿಯನ್ನು ಹಾಗೂ ರಾಷ್ಟ್ರೀಕೃತ ಬ್ಯಾಂಕ್‍ಗಳ ಸಹಯೋಗದೊಂದಿಗೆ 2 ಲಕ್ಷ ರೂ.ಗಳಿಂದ 5 ಲಕ್ಷದವರೆವಿಗೂ ಸಾಲ ಹಾಗೂ ಸಹಾಯಧನವನ್ನು ನೀಡಲಾಗುವುದು. ಸಾಲಕ್ಕೆ ನಿಗಮದಿಂದ ಕನಿಷ್ಠ 70,000 ರೂ.ಗಳಿಂದ ರೂ. 1.25 ಲಕ್ಷದವರೆವಿಗೂ ಸಹಾಯಧನವನ್ನು ನೀಡಲಾಗುವುದು.
ಮೈಕ್ರೋಸಾಲ ಯೋಜನೆ ವೈಯಕ್ತಿಕ (ಮಹಿಳೆಯರಿಗೆ ಮಾತ್ರ) 2020-21ನೇ ಸಾಲಿಗೆ ಮಾತ್ರ ಅನ್ವಯಿಸುವಂತೆ ಕೋವಿಡ್-19ರ ಪಿಡುಗಿನಿಂದಾಗಿ ತೊಂದರೆಗೊಳಗಾದ, ಕಡುಬಡತನದಲ್ಲಿರುವ ಅಲ್ಪಸಂಖ್ಯಾತ ಸಮುದಾಯದ ಅಂತ್ಯೋದಯ/ ಬಿ.ಪಿ.ಎಲ್. ಕಾರ್ಡ್ ಹೊಂದಿರುವ 25 ರಿಂದ 50 ವಯೋಮಾನದೊಳಗಿನ ಮಹಿಳೆಯರಿಗೆ, ಈ ಯೋಜನೆಯಡಿಯಲ್ಲಿ ಸಣ್ಣ ವ್ಯಾಪಾರ ಕೈಗೊಳ್ಳಲು ಆರಂಭಿಕ ಬಂಡವಾಳಕ್ಕಾಗಿ 10,000 ರೂ.ಗಳನ್ನು (8000 ರೂ. ಸಾಲ ಮತ್ತು 2000 ರೂ. ಸಹಾಯಧನ) ನೀಡಲಾಗುವುದು.
ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು ಮತ್ತು ಅರ್ಹತೆಗಳು: ಈ ಎಲ್ಲಾ ಯೋಜನೆಗಳಿಗೆ ಅರ್ಜಿ ಸಲ್ಲಿಸಲು 18 ರಿಂದ ಮೇಲ್ಪಟ್ಟು 45 ಹಾಗೂ 55 ವರ್ಷದೊಳಗೆ ವಯೋಮಿತಿಯಿರಬೇಕು. ಈ ಹಿಂದೆ ನಿಗಮದಿಂದ ಸೌಲಭ್ಯ ಪಡೆದಿರುವವರು ಮತ್ತೆ ಸೌಲಭ್ಯವನ್ನು ಪಡೆಯಲು ಅರ್ಹರಿರುವುದಿಲ್ಲ.
ಅರ್ಜಿದಾರರ ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿ ಮತ್ತು ಆಧಾರ್ ಕಾರ್ಡನ್ನು ಬ್ಯಾಂಕಿನ ಉಳಿತಾಯ ಖಾತೆಗೆ ಹೊಂದಾಣಿಕೆ (ಲಿಂಕ್) ಮಾಡಿರಬೇಕು. ಈಗಾಗಲೇ ಸಾಲ ಮನ್ನಾ ಆಗಿರುವ ಫಲಾನುಭವಿಗಳಿಗೆ ಹೊಸದಾಗಿ ಸಾಲ ನೀಡಲಾಗುವುದಿಲ್ಲ. ಫಲಾನುಭವಿಯು ರಾಜ್ಯದ ಮತೀಯ ಅಲ್ಪಸಂಖ್ಯಾತರಾಗಿದ್ದು, ರಾಜ್ಯದ ಖಾಯಂ ನಿವಾಸಿಯಾಗಿರಬೇಕು.
ಈ ಯೋಜನೆಯ ಲಾಭ ಪಡೆಯಲು ಅರ್ಜಿದಾರರ ವಾರ್ಷಿಕ ಆದಾಯ ಗ್ರಾಮಾಂತರ ಪ್ರದೇಶದವರಿಗೆ 81,000 ರೂ. ಮತ್ತು ನಗರ ಪ್ರದೇಶದವರಿಗೆ 1,03,000 ರೂ.ಗಳ ಒಳಗಿರಬೇಕು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮ (ನಿ) ಮೌಲಾನಾ ಆಜಾದ್ ಭವನ, 1ನೇ ಮಹಡಿ, ಆಕಾಶವಾಣಿ ಕ್ವಾಟ್ರಸ್ ಹಿಂಭಾಗ, ಸಾಲಗಾಮೆ ಮುಖ್ಯ ರಸ್ತೆ, ಶ್ರೀ ವಿದ್ಯಾ ಗಣಪತಿ ಅಡ್ಡರಸ್ತೆ, ಮಲ್ನಾಡ್ ಇಂಜಿನಿಯರಿಂಗ್ ಕಾಲೇಜ್ ಹತ್ತಿರ, ಹಾಸನ-573202 ಇವರನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ.
ಈ ಎಲ್ಲಾ ಯೋಜನೆಗಳಲ್ಲಿ ಆನ್‍ಲೈನ್ ನೋಂದಣಿ ಮಾಡಿದ ಮೇಲೆ ಪ್ರಿಂಟೌಟ್ ತೆಗೆದು ಸಂಬಂಧಿಸಿದ ಎಲ್ಲಾ ದಾಖಲಾತಿಗಳೊಂದಿಗೆ ಜಿಲ್ಲಾ ಕಚೇರಿಗೆ ಖುದ್ದಾಗಿ ಸಲ್ಲಿಸುವುದು. ಅರ್ಜಿಗಳನ್ನು ಆನ್‍ಲೈನ್ ನಲ್ಲಿ ಸಲ್ಲಿಸಲು ಡಿಸೆಂಬರ್ 10 ಕಡೆಯ ದಿನಾಂಕವಾಗಿರುತ್ತದೆ. ಹಾಗೂ ಆನ್‍ಲೈನ್ ಅರ್ಜಿ ಮತ್ತು ದಾಖಲಾತಿಗಳನ್ನು ಕಚೇರಿಗೆ ಸಲ್ಲಿಸಲು ಡಿಸೆಂಬರ್ 21 ಕಡೆಯ ದಿನಾಂಕವಾಗಿರುತ್ತದೆ. ಕಚೇರಿ ದೂರವಾಣಿ ಸಂಖ್ಯೆ: 08172-246333ಗೆ ಸಂಪರ್ಕಿಸಬಹುದಾಗಿದೆ ಎಂದು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.