ಬೆಂಗಳೂರು: ಕೊರೋನಾ ಸಂಕಷ್ಟದ ಕಾರಣ ಸಾಲದ ಕಂತು ಮುಂದೂಡಬೇಕೆಂದು ಒತ್ತಾಯ ಕೇಳಿಬಂದಿದೆ. ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿರುವುದರಿಂದ ಮಹಿಳಾ ಸ್ವಸಹಾಯ ಸಂಘಗಳು ಮತ್ತು ರೈತರಿಗೆ ತೊಂದರೆಯಾಗಿದೆ.
ಇಂತಹ ಸಂದರ್ಭದಲ್ಲಿ ಸಹಕಾರ ಇಲಾಖೆ ನೆರವಿಗೆ ಮುಂದಾಗಿದೆ. ರೈತರು ಸ್ವಸಹಾಯ ಸಂಘಗಳು ಮತ್ತು ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗುವಂತೆ ಜಿಲ್ಲಾ ಸಹಕಾರ ಬ್ಯಾಂಕುಗಳಿಗೆ ಲಾಭಾಂಶದಲ್ಲಿ ನಿಗದಿತ ಮೊತ್ತ ಮೀಸಲಿರಿಸಿ ಎಲ್ಲ ರೀತಿಯ ನೆರವು ನೀಡುವಂತೆ ಸುತ್ತೋಲೆ ಹೊರಡಿಸಲಾಗಿದೆ.
ಆದರೆ, ನೆರವಿಗಿಂತ ಸಾಲದ ಕಂತು ಮುಂದೂಡಬೇಕೆಂದು ಒತ್ತಾಯಿಸಲಾಗಿದೆ. ಇಲ್ಲವೇ ಸಾಲಮನ್ನಾ ಅಥವಾ ಬಡ್ಡಿ ಮನ್ನಾದಂತಹ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬಂದಿದೆ. ಕನಿಷ್ಠ ಮೂರು ತಿಂಗಳ ಮಟ್ಟಿಗೆ ಸಾಲದ ಕಂತು ಮುಂದೂಡಿದರೆ ಅನುಕೂಲವಾಗುತ್ತದೆ. ಈ ಹಿನ್ನೆಲೆಯಲ್ಲಿ ರೈತರು ಮತ್ತು ಸ್ತ್ರೀಶಕ್ತಿ ಸಂಘಗಳ ಮಹಿಳೆಯರು ಮನವಿ ಮಾಡಿದ್ದಾರೆ.
ಕಳೆದ ವರ್ಷ ಲಾಕ್ ಡೌನ್ ಮಾಡಿದ ಸಂದರ್ಭದಲ್ಲಿ ಆರು ತಿಂಗಳು ಸಾಲದ ಕಂತು ಪಾವತಿ ಮುಂದೂಡಲಾಗಿತ್ತು. ಈ ಬಾರಿ ಗ್ರಾಮೀಣ ಪ್ರದೇಶದಲ್ಲಿ ಸೋಂಕು ವ್ಯಾಪಕವಾಗಿ ಹರಡಿರುವುದರಿಂದ ಜನ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಗಾಗಿ, ಸಾಲಮನ್ನಾ ಇಲ್ಲವೇ ಬಡ್ಡಿಮನ್ನಾ ಮಾಡಬೇಕು ಅಥವಾ ಸಾಲದ ಕಂತು ಪಾವತಿ ಮಾಡಬೇಕೆಂಬ ಒತ್ತಾಯ ಕೇಳಿಬಂದಿದ್ದು, ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.