ಬೆಂಗಳೂರು: ಕೊರೋನಾ ಕಾರಣದಿಂದ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೂಚಿಸಿದ್ದು ಅದರಂತೆ 39 ಸಾವಿರ ಕೋಟಿ ರೂಪಾಯಿ ಕೃಷಿ ಮತ್ತು ಕೃಷಿಯೇತರ ಸಾಲ ನೀಡಲಾಗುತ್ತಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ.
ಶೂನ್ಯ ಬಡ್ಡಿದರದಲ್ಲಿ 24.5 ಲಕ್ಷ ರೈತರಿಗೆ 15,300 ಕೋಟಿ ರೂಪಾಯಿ ಬೆಳೆ ಸಾಲ ವಿತರಣೆ ಗುರಿ ಹೊಂದಿದ್ದು ಸೆಪ್ಟಂಬರ್ 14 ರವರೆಗೆ 12.11 ಲಕ್ಷ ರೈತರಿಗೆ 7,929 ಕೋಟಿ ರೂ. ಸಾಲ ವಿತರಿಸಲಾಗಿದೆ.
ಕೃಷಿ ಕ್ಷೇತ್ರಕ್ಕೆ 15,300 ಕೋಟಿ ರೂ., ಕೃಷಿಯೇತರ ಕ್ಷೇತ್ರಕ್ಕೆ 24,000 ಕೋಟಿ ರೂಪಾಯಿ ಸೇರಿ 39,300 ಕೋಟಿ ರೂ. ಸಾಲ ಒದಗಿಸಲಾಗುವುದು. ಕೊರೋನಾ ಕಾರಣದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಕ್ಷೇತ್ರಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದಿಂದ ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗೆ ಸಹಕಾರಿ ವಲಯದ ಬ್ಯಾಂಕ್ ಗಳಿಂದ 39 ಸಾವಿರ ಕೋಟಿ ರೂಪಾಯಿ ಸಾಲ ವಿತರಿಸಲಾಗುವುದು. ಈ ಮಹತ್ವಾಕಾಂಕ್ಷೆಯ ಆರ್ಥಿಕ ಸ್ಪಂದನ ಕಾರ್ಯಕ್ರಮಕ್ಕೆ ನಾಳೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ. ವಿಧಾನಸೌಧ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ 50 ಫಲಾನುಭವಿಗಳಿಗೆ ಚೆಕ್ ವಿತರಿಸಲಿದ್ದು, ಸಚಿವರ ಸೋಮಶೇಖರ್, ಕೇಂದ್ರ ಸಚಿವರಾದ ಡಿ.ವಿ. ಸದಾನಂದಗೌಡ, ನಿರ್ಮಲಾ ಸೀತಾರಾಮನ್ ಮೊದಲಾದವರು ಭಾಗಿಯಾಗಲಿದ್ದಾರೆ.