57 ಸಾವಿರ ರೈತರು ಸೂಕ್ತ ದಾಖಲೆ ಒದಗಿಸಿದರೆ ಬೆಳೆ ಸಾಲ ಮನ್ನಾ ಮಾಡಲು ಸರ್ಕಾರ ಸಿದ್ಧವಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಮಾಹಿತಿ ನೀಡಿದ್ದಾರೆ.
ವಿಧಾನ ಪರಿಷತ್ ನಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಎಂ. ನಾರಾಯಣಸ್ವಾಮಿ ಅವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ಸಹಕಾರ ಸಂಘಗಳಿಂದ 1 ಲಕ್ಷ ರೂ. ಬೆಳೆ ಸಾಲ ಮನ್ನಾ ಯೋಜನೆಯಡಿ ಸಾಲ ಪಡೆದ ರೈತರಿಗೆ 3 ಬಾರಿ ದಾಖಲೆ ಸಲ್ಲಿಸಲು ಅವಕಾಶ ನೀಡಿದ್ದರೂ ಕೂಡ 57 ಸಾವಿರ ರೈತರು ಸಮರ್ಪಕ ದಾಖಲೆ ಒದಗಿಸಿಲ್ಲ. ಹಾಗಾಗಿ ಸಾಲ ಮನ್ನಾ ಮಾಡಿಲ್ಲ. ಸೂಕ್ತ ದಾಖಲೆ ನೀಡಿದಲ್ಲಿ ಸಾಲಮನ್ನಾ ಮಾಡಲಾಗುವುದು ಎಂದು ಹೇಳಿದ್ದಾರೆ.
ಸಾಲಮನ್ನಾ ಯೋಜನೆಯಡಿ 17.06 ಲಕ್ಷ ಅರ್ಹ ರೈತರನ್ನು ಗುರುತಿಸಿದ್ದು 7987.47 ಕೋಟಿ ರೂಪಾಯಿ ಸಾಲ ಮನ್ನಾ ಮಾಡಲಾಗಿದೆ. ಇದರಲ್ಲಿ 16.49 ಲಕ್ಷ ರೈತರ 7692.32 ಕೋಟಿ ರೂ. ಹಣ ಬಿಡುಗಡೆಯಾಗಿದ್ದು, ಉಳಿದ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.