ಬೆಂಗಳೂರು: ಸಾಲಮನ್ನಾ ಪ್ರಯೋಜನ ಪಡೆಯಲು ಕಾಯುತ್ತಿದ್ದ 57 ಸಾವಿರ ರೈತರಿಗೆ ಕೊನೆಗೂ ಸಿಹಿ ಸುದ್ದಿ ಸಿಕ್ಕಿದೆ. ಮೈತ್ರಿ ಸರ್ಕಾರದ ಅವಧಿಯಲ್ಲಿ ಘೋಷಿಸಿದ್ದ ಸಾಲಮನ್ನಾ ಅರ್ಹತೆಗಾಗಿ 57 ಸಾವಿರ ರೈತರು ಕಾಯುತ್ತಿದ್ದರು.
ಕಳೆದ ಎರಡು ವರ್ಷದಲ್ಲಿ ಮೂರು ಸಲ ದಾಖಲಾತಿ ಪರಿಶೀಲನೆಯ ನಂತರ 57 ಸಾವಿರ ರೈತರ ಸಾಲ ಮನ್ನಾ ಪ್ರಯೋಜನಕ್ಕೆ ಅರ್ಹತೆ ಪಡೆದುಕೊಂಡಿದ್ದರು. ಇವರೆಲ್ಲ ಸಹಕಾರಿ ಸಂಘಗಳಲ್ಲಿ ಪಡೆದುಕೊಂಡಿದ್ದ ಸಾಲವನ್ನು ಮನ್ನಾ ಮಾಡಲಾಗುವುದು ಎಂದು ಹೇಳಲಾಗಿದೆ.
57 ಸಾವಿರ ರೈತರ ಸಾಲಮನ್ನಾ ಮಾಡಲು ಹಣಕಾಸು ಇಲಾಖೆಗೆ 295.15 ಕೋಟಿ ರೂಪಾಯಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಹಣಕಾಸು ಇಲಾಖೆ ಒಪ್ಪಿಗೆ ನೀಡಿದೆ. ಇನ್ನು 60 ಸಾವಿರ ರೈತರ ದಾಖಲೆಗಳ ಪರಿಶೀಲನೆ ನಡೆದಿದೆ. 1 ಲಕ್ಷ ರೂಪಾಯಿಯವರೆಗೆ ಸಾಲ ಪಡೆದ ರೈತರ ಸಾಲವನ್ನು ಮನ್ನಾ ಮಾಡಲು ಘೋಷಿಸಲಾಗಿತ್ತು. ಇದರಿಂದಾಗಿ 16.49 ಲಕ್ಷ ರೈತರಿಗೆ ಪ್ರಯೋಜನ ದೊರೆತಿದೆ ಎಂದು ಹೇಳಲಾಗಿದೆ.