ಬೆಂಗಳೂರು: ಸಾಲ ಮನ್ನಾ ನಿರೀಕ್ಷೆಯಲ್ಲಿದ್ದ ರೈತರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ.
ಸರ್ಕಾರ ಸಾಲ ಮನ್ನಾ ಮಾಡಲು ಆದೇಶ ಹೊರಡಿಸಿಲ್ಲ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ.
ಕೊರೋನಾದಿಂದಾಗಿ ಮೃತಪಟ್ಟ ರೈತರು ಸಹಕಾರ ಸಂಸ್ಥೆಗಳಲ್ಲಿ ಪಡೆದುಕೊಂಡ ಸಾಲವನ್ನು ಮನ್ನಾ ಮಾಡಲು ಯಾವುದೇ ಆದೇಶ ಹೊರಡಿಸಿಲ್ಲ. ಈ ಬಗ್ಗೆ ನಿರ್ಧಾರ ಕೈಗೊಳ್ಳುವ ಅವಕಾಶವನ್ನು ಆಯಾ ಸಹಕಾರ ಸಂಸ್ಥೆಗಳಿಗೆ ನೀಡಲಾಗಿದೆ ಎಂದು ವಿಧಾನಪರಿಷತ್ ನಲ್ಲಿ ಬಿಜೆಪಿ ಸದಸ್ಯ ಮುನಿರಾಜು ಗೌಡ ಅವರ ಪ್ರಶ್ನೆಗೆ ಸಚಿವರು ಉತ್ತರ ನೀಡಿದ್ದಾರೆ.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳು, ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕುಗಳಲ್ಲಿ ಕೊರೋನಾ ಮೊದಲೆರಡು ಅಲೆಯಲ್ಲಿ ಮತಪಟ್ಟ ರೈತರಲ್ಲಿ 10,437 ರೈತರು 91.97 ಕೋಟಿ ರೂಪಾಯಿ ಸಾಲ ಪಡೆದಿದ್ದಾರೆ. ಲಾಭದಲ್ಲಿರುವ ಸಹಕಾರಿ ಸಂಸ್ಥೆಗಳು ಲಾಭಾಂಶ ಬಳಸಿಕೊಂಡು ಅಂತಹ ರೈತರ ಸಾಲ ಮನ್ನ ಮಾಡಬಹುದು ಎಂದು ಸೂಚನೆ ನೀಡಲಾಗಿದೆ. ಇದರ ಅನುಸಾರ ಕೆಲವು ಸಹಕಾರಿ ಸಂಸ್ಥೆಗಳು ತಮ್ಮ ಆರ್ಥಿಕ ಶಕ್ತಿಗೆ ಅನುಗುಣವಾಗಿ ತೀರ್ಮಾನ ಕೈಗೊಂಡಿವೆ ಎಂದು ತಿಳಿಸಿದ್ದಾರೆ.
ಕೊರೊನಾದಿಂದ ಮೃತಪಟ್ಟ ರೈತರು ಸೇರಿದಂತೆ ಎಲ್ಲಾ ಕುಟುಂಬದವರಿಗೆ ಕೇಂದ್ರ ಸರ್ಕಾರದಿಂದ 50 ಸಾವಿರ ರೂಪಾಯಿ, ರಾಜ್ಯಸರ್ಕಾರದಿಂದ ಬಿಪಿಎಲ್ ಕುಟುಂಬದವರಿಗೆ 1 ಲಕ್ಷ ರೂ. ಆರ್ಥಿಕ ನೆರವು ನೀಡಲಾಗಿದೆ. ಸಾಲ ಮನ್ನಾ ಮಾಡುವ ಬಗ್ಗೆ ಲಾಭದಲ್ಲಿರುವ ಡಿಸಿಸಿ ಬ್ಯಾಂಕುಗಳು ತೀರ್ಮಾನ ಕೈಗೊಳ್ಳಲು ಮೌಖಿಕವಾಗಿ ಆದೇಶ ನೀಡಲಾಗಿದೆ ಎಂದರು.