
ಬೆಂಗಳೂರು: ಇಲಾಖಾವಾರು ಅನುದಾನ, ಬೇಡಿಕೆ ಮೇಲಿನ ಚರ್ಚೆಗೆ ಸಹಕಾರ ಇಲಾಖೆ ಸಚಿವ ಎಸ್.ಟಿ. ಸೋಮಶೇಖರ್ ಉತ್ತರ ನೀಡಿದ್ದಾರೆ.
2017 -18ರಲ್ಲಿ ಬಾಕಿ ಅಲ್ಪಾವಧಿ ಸಾಲ ಮನ್ನಾ ಮಾಡಲಾಗಿದೆ. ಸಹಕಾರ ಸಂಘದಿಂದ ರೈತರು ಪಡೆದುಕೊಂಡಿದ್ದ ಅಲ್ಪಾವಧಿ ಸಾಲವನ್ನು ಮನ್ನಾ ಮಾಡಲಾಗಿದೆ. 2018ರ ಆಗಸ್ಟ್ 14ರಂದು 1 ಲಕ್ಷ ರೂಪಾಯಿ ಸಾಲ ಮನ್ನಾ ಮಾಡಿ ಆದೇಶ ಹೊರಡಿಸಲಾಗಿದೆ ಎಂದು ಹೇಳಿದ್ದಾರೆ.
20.38 ಲಕ್ಷ ರೈತರಿಗೆ 9,448.62 ಕೋಟಿ ರೂ ಸಾಲ ಮನ್ನಾ ಅಂದಾಜು ಮಾಡಿ 18.95 ಲಕ್ಷ ರೈತರಿಂದ ರೈತರಿಂದ ಸ್ವಯಂ ದೃಢೀಕರಣ ಪತ್ರ ಪಡೆದುಕೊಳ್ಳಲಾಗಿದೆ. ಇದರಲ್ಲಿ 17.37 ಲಕ್ಷ ರೈತರ 8,154.98 ಕೋಟಿ ರೂ. ಸಾಲ ಮನ್ನಾ ಮಾಡಲಾಗಿದೆ. ರೈತರ ಸಾಲ ಮನ್ನಾ ಮಾಡಲು ಹಸಿರು ಪಟ್ಟಿ ತಯಾರಿಸಲಾಗಿದೆ ಎಂದರು.
2018 -19 ರಲ್ಲಿ 5.57 ಲಕ್ಷ ರೈತರ 2600 ಕೋಟಿ ರೂಪಾಯಿ ಸಾಲ ಮನ್ನಾ ಮಾಡಲಾಗಿದೆ.
2019 -20 ರಲ್ಲಿ 10.91 ಲಕ್ಷ ರೈತರ 5092.33 ಕೋಟಿ ರೂಪಾಯಿ ಸಾಲ ಮನ್ನಾ ಮಾಡಲಾಗಿದೆ.
2020 -21 ರಲ್ಲಿ 58 ಸಾವಿರ ರೈತರ 295.14 ಕೋಟಿ ರೂಪಾಯಿ ಸಾಲ ಮನ್ನಾ ಮಾಡಲಾಗಿದೆ.
ಒಟ್ಟು 7987.47 ಕೋಟಿ ರೂಪಾಯಿ ರೈತರ ಸಾಲ ಮನ್ನಾ ಮಾಡಲಾಗಿದೆ. 31,000 ರೈತರಿಗೆ 167.51 ಕೋಟಿ ರೂ ಬಿಡುಗಡೆ ಮಾಡಲು ಸಹಕಾರ ಇಲಾಖೆಯಿಂದ ಆರ್ಥಿಕ ಇಲಾಖೆಗೆ ಅಂದಾಜು ಪ್ರಸ್ತಾವನೆ ಸಲ್ಲಿಸಲಾಗಿದೆ.
13,500 ರೈತರ ಅರ್ಹತೆ ಗುರುತಿಸುವುದು ಬಾಕಿ ಇದೆ. ಅದರ ಗ್ರೀನ್ ಲಿಸ್ಟ್ ಬಂದ ನಂತರ ಸಾಲ ಮನ್ನಾ ಮಾಡಲಾಗುವುದು ಎಂದು ವಿಧಾನಸಭೆಯಲ್ಲಿ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ.