ಪ್ರಧಾನ ಮಂತ್ರಿಗಳ ಆತ್ಮನಿರ್ಭರ ಭಾರತ ಯೋಜನೆಯನ್ವಯ ಒಂದು ಜಿಲ್ಲೆ ಒಂದು ಉತ್ಪನ್ನ(ODOP) ಆಧರಿಸಿ ಧಾರವಾಡ ಜಿಲ್ಲೆಯಲ್ಲಿ ಕಿರು ಆಹಾರ ಉದ್ಯಮಗಳನ್ನು ಸ್ಥಾಪಿಸಲು ಉತ್ತೇಜನ ನೀಡಲಾಗುತ್ತಿದೆ. ಈ ಯೋಜನೆಯಡಿ 10 ಲಕ್ಷ ರೂ.ವರೆಗೆ ಸಾಲ ಸೌಲಭ್ಯವಿದೆ. ಈವರೆಗೆ ಶೇ. 35 ರಷ್ಟಿದ್ದ ಸಹಾಯಧನವನ್ನು ಶೇ. 50 ಕ್ಕೆ ಹೆಚ್ಚಿಸಲಾಗಿದೆ.
ಪ್ರಧಾನ ಮಂತ್ರಿ ಆತ್ಮ ನಿರ್ಭರ ಯೋಜನೆಯಡಿ ಕೇಂದ್ರ ಸರ್ಕಾರವು ನೀಡುವ ಶೇ.35 ರ ಸಹಾಯಧನದ ಜೊತೆಗೆ ಮುಖ್ಯಮಂತ್ರಿಗಳು ಆಯವ್ಯಯ ಭಾಷಣದಲ್ಲಿ ಹೆಚ್ಚುವರಿಯಾಗಿ ರಾಜ್ಯ ಸರ್ಕಾರದ ಶೇ.15 ರಷ್ಟು ಸಹಾಯಧನವನ್ನು ನೀಡುವದಾಗಿ ಘೋಷಿಸಿದ್ದರು. ಇದರನ್ವಯ ಸರ್ಕಾರದ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆಯಾಗಿದೆ. ಪ್ರಸ್ತುತ ಯೋಜನೆಯಡಿಯಲ್ಲಿ ಕಿರು ಉದ್ಯಮಗಳನ್ನು ಸ್ಥಾಪಿಸಲು ಇಚ್ಚಿಸುವ ಫಲಾನುಭವಿಗಳಿಗೆ ಈಗಿರುವ ಶೇ.35 ರ ಸಹಾಯಧನದ ಬದಲಾಗಿ ಶೇ.50 ರಷ್ಟು ಒಟ್ಟು ಸಾಲ ಸಂಪರ್ಕಿತ ಸಹಾಯಧನ ಸಿಗಲಿದೆ.
ವೈಯಕ್ತಿಕ ಕಿರು ಆಹಾರ ಸಂಸ್ಕರಣಾ ಘಟಕಗಳು, ರೈತ ಉತ್ಪಾದಕ ಕಂಪನಿಗಳು(ಎಫ್.ಪಿ.ಓ.), ಸ್ವಸಹಾಯ ಸಂಘಗಳು (ಎಸ್.ಎಚ್.ಜಿ.), ಸಹಕಾರ ಸಂಘಗಳು ಅಲ್ಲದೇ ಸಾಮಾನ್ಯ ಮೂಲಭೂತ ಸೌಕರ್ಯ, ಬ್ರ್ಯಾಂಡಿಂಗ್ ಮತ್ತು ಮಾರುಕಟ್ಟೆ ಬೆಂಬಲ ಚಟುವಟಿಕೆಗಳಿಗೆ ಸಾಲ ನೀಡುವ ಯೋಜನೆ ಇದಾಗಿದೆ. ಜಿಲ್ಲೆಯ ಫಲಾನುಭವಿಗಳು ಇದರ ಲಾಭ ಪಡೆಯಬೇಕು. ಒಂದು ಜಿಲ್ಲೆ ಒಂದು ಉತ್ಪನ್ನ ಆಧಾರದಲ್ಲಿ ಧಾರವಾಡ ಜಿಲ್ಲೆಗೆ ಮಾವು ಬೆಳೆಯನ್ನು ಸೂಚಿಸಲಾಗಿದೆ. ಅರ್ಹ ಫಲಾನುಭವಿಗಳು ಹೊಸದಾಗಿ ಮಾವು ಆಧಾರಿತ ಉದ್ಯಮಗಳನ್ನು ಸ್ಥಾಪಿಸಬಹುದಾಗಿದೆ. ಇದರ ಜೊತೆಗೆ ಈಗಾಗಲೇ ಅಸ್ತಿತ್ವದಲ್ಲಿರುವ ಇತರೆ ಅಸಂಘಟಿತ ಕಿರುಆಹಾರ ಘಟಕಗಳ ಉನ್ನತೀಕರಣಕ್ಕಾಗಿ ಕೂಡಾ ಯೋಜನಾ ವೆಚ್ಚವನ್ನು ಆಧರಿಸಿ ಸಹಾಯಧನದೊಂದಿಗೆ ಬ್ಯಾಂಕ್ ಸಾಲವನ್ನು ನೀಡಲಾಗುವುದು.
ಯೋಜನೆಯಡಿಯಲ್ಲಿ ಸಾಲ ಪಡೆಯಲು ಭಾರತ ಸರ್ಕಾರದ ಆಹಾರ ಸಂಸ್ಕರಣಾ ಕೈಗಾರಿಕೆಗಳ ಮಂತ್ರಾಲಯ (MOFPI) ಪೋರ್ಟಲ್‍ನಲ್ಲಿ ಆನ್‍ಲೈನ ಅರ್ಜಿ ಸಲ್ಲಿಸಬೇಕಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕೃಷಿ ಇಲಾಖೆಯು ನೇಮಿಸಿರುವ ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳು(ಡಿ.ಆರ್.ಪಿ.) ಮಾರ್ಗದರ್ಶನ ನೀಡುತ್ತಾರೆ. ಫಲಾನುಭವಿಗಳ ದಾಖಲೆಗಳ ಕ್ರೋಢೀಕರಣವೂ ಸೇರಿದಂತೆ ವಿಸ್ತøತ ಯೋಜನೆ ವರದಿ ತಯಾರಿಕೆ ಹಾಗೂ ಇತರೆ ತಾಂತ್ರಿಕ ಮಾರ್ಗದರ್ಶನವನ್ನು ಬಂಡೇರಾವ್ ಪಟವಾರಿ-944848735, ಪ್ರಿಯಾ ಕಿವಡಸಣ್ಣವರ-9060202709, ಸಂತೋಷ ಸವದತ್ತಿ-9620902750, ಕೆ.ಎಫ್.ಉದೋಜಿ-9035774929 ಡಿ.ಆರ್.ಪಿ.ಗಳಿಂದ ಪಡೆಯಬಹುದಾಗಿದೆ.
ಸರ್ಕಾರದ ಮಹಾತ್ವಾಕಾಂಕ್ಷಿ ಕಾರ್ಯಕ್ರಮ ಇದಾಗಿದೆ. ಜಿಲ್ಲೆಯ ಕಿರು ಆಹಾರ ಘಟಕಗಳ ಉದ್ಯಮಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಜಂಟಿ ಕೃಷಿ ನಿರ್ದೇಶಕರು ಕೋರಿದ್ದಾರೆ.