ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾರ್ಚ್ ನಲ್ಲಿ ಬಜೆಟ್ ಮಂಡಿಸಲಿದ್ದಾರೆ. ಮಾರ್ಚ್ ಮೊದಲ ವಾರ ಹಣಕಾಸು ಖಾತೆ ಹೊಂದಿರುವ ಸಿಎಂ ಬಜೆಟ್ ಮಂಡನೆ ಮಾಡಲಿದ್ದಾರೆ. ಈ ವೇಳೆ ಮದ್ಯದ ಮೇಲೆ ಶೇಕಡ 10 ರವರೆಗೆ ತೆರಿಗೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಕೊರೋನಾ ಕಾರಣದಿಂದ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಸರ್ಕಾರ ಆರ್ಥಿಕ ಚೇತರಿಕೆ, ಸಂಪನ್ಮೂಲ ಸಂಗ್ರಹಣೆಗೆ ಒತ್ತು ನೀಡಿದ್ದು, ಇಂಡಿಯನ್ ಮೇಡ್ ಲಿಕ್ಕರ್ ಮತ್ತು ಬಿಯರ್ ಮೇಲೆ ಶೇಕಡ 5 ರಿಂದ 10 ರಷ್ಟು ಅಬಕಾರಿ ಸುಂಕ ಹೆಚ್ಚಲಕ್ಕೆ ಚಿಂತನೆ ನಡೆಸಿದೆ ಎನ್ನಲಾಗಿದೆ.
ಅಬಕಾರಿ ಸಚಿವರು, ಇಲಾಖೆಯ ಅಧಿಕಾರಿಗಳೊಂದಿಗೆ ಸಿಎಂ ಚರ್ಚೆ ನಡೆಸಿ ಸುಂಕ ಹೆಚ್ಚಳ ಬಗ್ಗೆ ಕ್ರಮಕೈಗೊಳ್ಳಲಿದ್ದಾರೆ. ಕಳೆದ ಬಜೆಟ್ ನಲ್ಲಿ ಮದ್ಯದ ಮೇಲೆ ಶೇಕಡ 6 ರಷ್ಟು ಹೆಚ್ಚುವರಿ ಅಬಕಾರಿ ಸುಂಕ ಹೇರಲಾಗಿತ್ತು. ಲಾಕ್ಡೌನ್ ಜಾರಿಯಾಗಿದ್ದ ಕಾರಣ ಮೇ ನಲ್ಲಿ ವೈನ್ ಮತ್ತು ಬಿಯರ್ ಹೊರತುಪಡಿಸಿ ಇಂಡಿಯನ್ ಮೇಡ್ ಲಿಕ್ಕರ್ ಮೇಲೆ ಶೇಕಡ 17 ರಷ್ಟು ಅಬಕಾರಿ ಸುಂಕ ಹೆಚ್ಚಳ ಮಾಡಲಾಗಿತ್ತು. ಈ ಬಾರಿ ಶೇಕಡಾ 10 ರಷ್ಟು ಹೆಚ್ಚಳ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.