ಬೆಂಗಳೂರು: ರಾಜ್ಯದ ಬಾರ್ ಗಳಲ್ಲಿ ಇಂದು ಮದ್ಯ ಸಿಗುವುದು ಅನುಮಾನವೆನ್ನಲಾಗಿದೆ. KSBCL ನೂತನ ಸಾಫ್ಟ್ವೇರ್ ಅಪ್ಡೇಟ್ ಆಗದ ಹಿನ್ನೆಲೆಯಲ್ಲಿ ಬಿಲ್ಲಿಂಗ್ ಸಮಸ್ಯೆಯಿಂದ ಬಾರ್ ಗಳಿಗೆ ಮದ್ಯ ಪೂರೈಕೆಯಾಗಿಲ್ಲ.
ಬಿಲ್ಲಿಂಗ್ ಸಮಸ್ಯೆಯಿಂದ ಕಳೆದ ಎರಡು ದಿನಗಳಿಂದ ಬಾರ್ ಗಳಿಗೆ ಮದ್ಯ ಪೂರೈಕೆಯಾಗಿಲ್ಲದ ಕಾರಣ ಕೊರತೆ ಉಂಟಾಗಿದೆ. ಇಂದು ಮದ್ಯ ಸಿಗುವುದು ಅನುಮಾನ ಎಂದು ಹೇಳಲಾಗಿದೆ.
ಕೆ.ಎಸ್.ಬಿ.ಸಿ.ಎಲ್. ಡಿಪೋಗಳ ಮುಂದೆ ಇಂದು ರಾಜ್ಯದ ಬಾರ್ ಮಾಲೀಕರು ಬೃಹತ್ ಪ್ರತಿಭಟನೆ ಕೈಗೊಂಡಿದ್ದಾರೆ.
ಫೆಡರೇಶನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ವತಿಯಿಂದ ಏಪ್ರಿಲ್ 6 ರಂದು ರಾಜ್ಯದ ಎಲ್ಲಾ ಕೆ.ಎಸ್.ಬಿ.ಸಿ.ಎಲ್. ಡಿಪೋ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಏಪ್ರಿಲ್ 4 ರಿಂದ ವೆಬ್ ಇಂಡೆಂಟಿಂಗ್ ಮೂಲಕ ಮದ್ಯ ಖರೀದಿಸಲು ಕೆ.ಎಸ್.ಬಿ.ಸಿ.ಎಲ್. ಆದೇಶಿಸಿದೆ. ಈ ಹೊಸ ಪದ್ಧತಿಯಲ್ಲಿ ಮದ್ಯ ಖರೀದಿಸಲು ಸನ್ನದುದಾರರಿಗೆ ತೊಂದರೆ ಉಂಟಾಗುತ್ತಿದೆ. ಹೊಸ ಪದ್ಧತಿಗೆ ಹೊಂದಿಕೊಳ್ಳುವ ಒಂದು ತಿಂಗಳವರೆಗೆ ಹೊಸ ಪದ್ಧತಿಯೊಂದಿಗೆ ಹಳೆ ಪದ್ಧತಿಯನ್ನು ಮುಂದುವರೆಸುವಂತೆ ವಿನಂತಿಸಿದರೂ, ಯಾವುದೇ ಪ್ರಯೋಜನವಾಗಿಲ್ಲ.
ಬಿಲ್ಲಿಂಗ್ ಸಮಸ್ಯೆಯಿಂದಾಗಿ ಸನ್ನದುಗಳಲ್ಲಿ ಮದ್ಯ ಪೂರೈಕೆಯಾಗದ ಕಾರಣ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಒಂದು ತಿಂಗಳ ಮಟ್ಟಿಗಾದರೂ ಹಳೆ ಪದ್ಧತಿಯನ್ನು ಹೊಸ ಪದ್ಧತಿಯೊಂದಿಗೆ ಚಾಲ್ತಿಯಲ್ಲಿಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ಕೈಗೊಳ್ಳಲಾಗಿದೆ. ಹೀಗಾಗಿ ಬಾರ್ ಗಳಲ್ಲಿ ಮದ್ಯದ ಕೊರತೆ ಉಂಟಾಗಿ ತೊಂದರೆಯಾಗಿದೆ ಎನ್ನಲಾಗಿದೆ.