ಬೆಂಗಳೂರು: ಜುಲೈ 20 ರಿಂದ ಮದ್ಯದ ದರ ದುಬಾರಿಯಾಗಲಿದೆ. 2023 -24ನೇ ಸಾಲಿನ ಬಜೆಟ್ ನಲ್ಲಿ ಘೋಷಣೆ ಮಾಡಿರುವಂತೆ ಮದ್ಯದ ಮೇಲಿನ ಸುಂಕ ಏರಿಕೆ ಜುಲೈ 20 ರಿಂದ ಜಾರಿಯಾಗಲಿದೆ.
ಅಂದಿನಿಂದ ಮದ್ಯದ ಬೆಲೆ ಹೆಚ್ಚಳ ಆಗಲಿದೆ. ಅಬಕಾರಿ ಮೇಲಿನ ಹೆಚ್ಚುವರಿ ಸುಂಕ ಹೆಚ್ಚಳ ಕುರಿತಾಗಿ ಸರ್ಕಾರದಿಂದ ಸೋಮವಾರ ಕರಡು ಪ್ರಕಟಿಸಲಾಗಿದ್ದು, 7 ದಿನಗಳೊಳಗೆ ಆಕ್ಷೇಪಣೆ ಸಲ್ಲಿಸಲು ಕೋರಲಾಗಿದೆ,
ವಿಸ್ಕಿ, ರಂ, ಬ್ರಾಂಡಿ, ಜಿನ್ ಸೇರಿದಂತೆ ಎಲ್ಲಾ ಬಗೆಯ ಭಾರತೀಯ ಮದ್ಯದ ಮೇಲೆ ಎಲ್ಲಾ ಘೋಷಿತ 18 ಸ್ಲ್ಯಾಬ್ ಗಳ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ಹಾಲಿ ಇರುವ ದರಕ್ಕಿಂತ ಶೇಕಡ 20ರಷ್ಟು ಹೆಚ್ಚಳವಾಗಲಿದೆ. ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ಶೇಕಡ 10ರಷ್ಟು ಹೆಚ್ಚಳ ಮಾಡಲಿದ್ದು, ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ಶೇಕಡ 175 ರಿಂದ ಶೇಕಡ 185ರಷ್ಟು ಹೆಚ್ಚಳವಾಗಲಿದೆ.
ಭಾರತೀಯ ಮದ್ಯ 60 ಎಂಎಲ್ ಒಂದು ಪೆಗ್ ಗೆ 10 ರಿಂದ 20 ರೂಪಾಯಿ ಹೆಚ್ಚಳ ಆಗಲಿದೆ. ಬಿಯರ್ ಬೆಲೆ ಪ್ರತಿ ಬಾಟಲ್ ಗೆ ಮೂರರಿಂದ ಐದು ರೂಪಾಯಿ ಹೆಚ್ಚಳವಾಗಲಿದೆ ಎಂದು ಹೇಳಲಾಗಿದೆ.