ಟಾಟಾ ಕನ್ಸಲ್ಟನ್ಸಿ ಸರ್ವೀಸಸ್ (ಟಿಸಿಎಸ್) ದೇಶಾದ್ಯಂತ 40 ಸಾವಿರ ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಮುಂದಾಗಿದೆ. ಕಳೆದ ಬಾರಿ ಕೂಡ ಇಷ್ಟೇ ಪ್ರಮಾಣದ ನೇಮಕಾತಿ ಮಾಡಿಕೊಂಡಿದ್ದ ಟಿಸಿಎಸ್, ಈ ಬಾರಿ ಕೊರೊನಾದಿಂದಾಗಿ ಸಾಕಷ್ಟು ಆದಾಯ ನಷ್ಟ ಅನುಭವಿಸಿದ್ದರೂ ನೇಮಕಾತಿಯಲ್ಲಿ ಹಿಂದೇಟು ಹಾಕಿಲ್ಲ.
ಇನ್ನು ಅಮೆರಿಕಾದಲ್ಲಿ ಕಳೆದ ಬಾರಿಗಿಂತ ಈ ಬಾರಿಯ ನೇಮಕಾತಿಯನ್ನು ದ್ವಿಗುಣಗೊಳಿಸಲು ನಿರ್ಧರಿಸಿದ್ದು, ಎಚ್-1ಬಿ, ಎಲ್-1 ವೀಸಾ ವಿಚಾರದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೆಗೆದುಕೊಳ್ಳುವ ತೀರ್ಮಾನದ ಮೇಲೆ 2 ಸಾವಿರ ನೇಮಕಾತಿಗೆ ಗಂಭೀರ ಚಿಂತನೆ ನಡೆಸಿದೆ.
ಈ ಕುರಿತು ಮಾಹಿತಿ ನೀಡಿರುವ ಟಿಸಿಎಸ್ ಇವಿಪಿ ಮತ್ತು ಜಾಗತಿಕ ಮಾನವ ಸಂಪನ್ಮೂಲ ಮುಖ್ಯಸ್ಥ ಮಿಲಿಂದ್ ಲಕ್ಕದ್, ಅಂದಾಜು 40 ಸಾವಿರ ನೇಮಕಾತಿ ಎಂದುಕೊಂಡಿದ್ದೇವೆ. ಅದು 35 ಸಾವಿರವೂ ಆಗಬಹುದು, 45 ಸಾವಿರವೂ ಆಗಬಹುದು. ಈ ಪೈಕಿ ಶೇ.87 ರಷ್ಟು ಮಂದಿ ಈಗಾಗಲೇ ಅವರ ಕ್ಷೇತ್ರದಲ್ಲಿ ಕಲಿಯುತ್ತಿದ್ದು, ಉಳಿದ 8 ರಿಂದ 11 ಸಾವಿರ ಜನರನ್ನು ಪ್ರತಿ ವಾರ ಆನ್ ಲೈನ್ ಅಸೆಸ್ಮೆಂಟ್ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ವಿವರಿಸಿದರು.
ಇನ್ನು ಅಮೆರಿಕಾದಲ್ಲಿ ಇಂಜಿನಿಯರ್ ಮಾತ್ರವಲ್ಲದೆ, ಇತರೆ ಪದವೀಧರರನ್ನೂ ನೇಮಕ ಮಾಡಿಕೊಂಡಿದ್ದು, 2014 ರಿಂದ ಇದುವರೆಗೆ 20 ಸಾವಿರ ಅಮೆರಿಕನ್ನರಿಗೆ ಉದ್ಯೋಗ ನೀಡಿದೆ. ಎಚ್-1ಬಿ, ಎಲ್-1 ವೀಸಾ ವಿಚಾರದಲ್ಲಿ ಟ್ರಂಪ್ ನಿಲುವು ದುರದೃಷ್ಟಕರ ಎಂದು ಅಭಿಪ್ರಾಯಪಟ್ಟಿದ್ದಾರೆ.