ನವದೆಹಲಿ: ಡಿಸೆಂಬರ್ 14 ರಂದು ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನವನ್ನು ಆಚರಿಸಲು ಸರ್ಕಾರಿ ಸ್ವಾಮ್ಯದ CESL ಮುಂದಾಗಿದ್ದು, ಗ್ರಾಮ ಉಜಾಲಾ ಯೋಜನೆಯಡಿ ಹೆಚ್ಚಿನ ಸಬ್ಸಿಡಿಯೊಂದಿಗೆ ಪ್ರತಿ ಯೂನಿಟ್‌ಗೆ 10 ರೂ. ದರದಲ್ಲಿ ಎಲ್‌ಇಡಿ ಬಲ್ಬ್ ಗಳನ್ನು ವಿತರಿಸಲಿದೆ.
ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನವನ್ನು ಪ್ರತಿ ವರ್ಷ ಡಿಸೆಂಬರ್ 14 ರಂದು ಆಚರಿಸಲಾಗುತ್ತದೆ, ಕನ್ವರ್ಜೆನ್ಸ್ ಎನರ್ಜಿ ಸರ್ವಿಸಸ್ ಲಿಮಿಟೆಡ್(CESL), ಎನರ್ಜಿ ಎಫಿಷಿಯನ್ಸಿ ಸರ್ವಿಸಸ್ ಲಿಮಿಟೆಡ್(EESL) ಸ್ವಾಮ್ಯದ ಅಂಗಸಂಸ್ಥೆಯು ತಮ್ಮ ಪ್ರಮುಖ ಗ್ರಾಮ ಉಜಾಲಾ ಕಾರ್ಯಕ್ರಮ ವಿಸ್ತರಿಸಲಿದೆ ಎಂದು ವಿದ್ಯುತ್ ಸಚಿವಾಲಯದ ಹೇಳಿಕೆ ತಿಳಿಸಿದೆ.
ಎಲ್‌ಇಡಿ ಬಲ್ಬ್ ಗಳನ್ನು 5 ರಾಜ್ಯಗಳ 2,579 ಹಳ್ಳಿಗಳಲ್ಲಿ ಕಡಿಮೆ ಬೆಲೆಗೆ ನೀಡಲಾಗುವುದು. ಬಿಹಾರ, ಉತ್ತರ ಪ್ರದೇಶ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ಹೆಚ್ಚು ಸಬ್ಸಿಡಿ ದರದಲ್ಲಿ 10 ರೂಪಾಯಿಗೆ ಬಲ್ಬ್ ವಿತರಿಸಲಾಗುವುದು.
ಮಾರ್ಚ್ 2021 ರಲ್ಲಿ ಕೇಂದ್ರ ವಿದ್ಯುತ್, ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಆರ್.ಕೆ. ಸಿಂಗ್ ಅವರು ಪ್ರಾರಂಭಿಸಿದ ಈ ಕಾರ್ಯಕ್ರಮದಡಿ ಈಗಾಗಲೇ ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ 33 ಲಕ್ಷಕ್ಕೂ ಹೆಚ್ಚು ಎಲ್‌ಇಡಿ ಬಲ್ಬ್‌ಗಳ ವಿತರಣಾ ಗುರಿ ಸಾಧಿಸಲಾಗಿದೆ.
ಡಿಸೆಂಬರ್ 14 ರಿಂದ ಇದು ಇತರ ಮೂರು ರಾಜ್ಯಗಳಲ್ಲಿಯೂ ಜಾರಿಯಾಗಲಿದೆ. CESL 7-ವ್ಯಾಟ್ ಮತ್ತು 12-ವ್ಯಾಟ್ ಶಕ್ತಿ-ಸಮರ್ಥ LED ಬಲ್ಬ್ ಗಳನ್ನು ಒದಗಿಸಲಿದೆ. ಮೂರು ವರ್ಷಗಳ ಗ್ಯಾರಂಟಿ ಅವಧಿ ಇದೆ ಎಂದು ಹೇಳಲಾಗಿದೆ.