ನವದೆಹಲಿ: ಕಾಯ್ದೆ ಪಾಲಿಸದೆ ಸಿಬ್ಬಂದಿಗಳನ್ನು ವಜಾ ಮಾಡುವಂತಿಲ್ಲ ಎಂದು ಕಂಪನಿಗಳಿಗೆ ಕೇಂದ್ರ ಕಾರ್ಮಿಕ ಸಚಿವ ಭೂಪೇಂದ್ರ ಯಾದವ್ ಎಚ್ಚರಿಕೆ ನೀಡಿದ್ದಾರೆ.
ಐಟಿ ಸೇರಿದಂತೆ ಹಲವು ಕಂಪನಿಗಳಲ್ಲಿ ಸಿಬ್ಬಂದಿಯನ್ನು ಸಾಮೂಹಿಕವಾಗಿ ವಜಾಗೊಳಿಸಲಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು, ಕೈಗಾರಿಕಾ ವಿವಾದ ಕಾಯ್ದೆ ಪಾಲಿಸದೆ ನೌಕರರನ್ನು ಕೆಲಸದಿಂದ ವಜಾಗೊಳಿಸಿದಲ್ಲಿ ಕಾನೂನು ಬಹಿರವಾಗುತ್ತದೆ. ಕಾಯ್ದೆ ಪಾಲಿಸದೆ ಸಿಬ್ಬಂದಿಯನ್ನು ವಜಾ ಮಾಡುವಂತಿಲ್ಲ ಎಂದು ತಿಳಿಸಿದ್ದಾರೆ.
ರಾಜ್ಯಸಭೆಯಲ್ಲಿ ವಿವಿಧ ಬಹು ರಾಷ್ಟ್ರೀಯ ಕಂಪನಿಗಳು ಮತ್ತು ಭಾರತೀಯ ಕಂಪನಿಗಳು ಸಿಬ್ಬಂದಿಯನ್ನು ಸಾಮೂಹಿಕವಾಗಿ ವಜಾ ಮಾಡುತ್ತಿರುವುದನ್ನು ಕೇಂದ್ರ ಸರ್ಕಾರ ಗಮನಿಸಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಉದ್ಯಮಗಳಲ್ಲಿ ನೌಕರರ ವಜಾ ಮತ್ತು ಹಿಂಬಡ್ತಿಗೆ ಸಂಬಂಧಿಸಿದ ವಿಷಯಗಳು 1947ರ ಕೈಗಾರಿಕಾ ವಿವಾದ ಕಾಯ್ದೆ ವ್ಯಾಪ್ತಿಗೆ ಬರುತ್ತವೆ. ಕಾಯ್ದೆಯ ಪ್ರಕಾರ 100 ಅಥವಾ ಅದಕ್ಕಿಂತ ಹೆಚ್ಚು ಸಂಖ್ಯೆಯ ಸಿಬ್ಬಂದಿ ಹೊಂದಿರುವ ಸಂಸ್ಥೆಗಳು ಬೀಗಮುದ್ರೆ, ಹಿಂಬಡ್ತಿ, ವಜಾಗೊಳಿಸುವ ಮೊದಲು ಸಂಬಂಧಿತ ಸಕ್ಷಮ ಪ್ರಾಧಿಕಾರಗಳ ಪೂರ್ವಾನುಮತಿ ಪಡೆದುಕೊಳ್ಳಬೇಕಿದೆ ಎಂದರು.
ಕಾನೂನು ಪಾಲಿಸದಿದ್ದಲ್ಲಿ ಕಾರ್ಮಿಕರು ಪರಿಹಾರ ಪಡೆಯಲು, ಮರು ನೇಮಕಾತಿಗೆ ಅರ್ಹರಾಗಿರುತ್ತಾರೆ. ನಿಯಮ ಪಾಲನೆಯಾಗದಿದ್ದಲ್ಲಿ ಅದು ಕಾನೂನು ಬಾಹಿರ ಎಂದು ಹೇಳಿದ್ದಾರೆ.