ನವದೆಹಲಿ: ಯುಎಇ ಕಚ್ಚಾತೈಲ ಖರೀದಿ ವ್ಯವಹಾರವನ್ನು ಇದೇ ಮೊದಲ ಬಾರಿಗೆ ಭಾರತೀಯ ಕರೆನ್ಸಿ ರೂಪಾಯಿಯಲ್ಲಿ ನಡೆಸುವ ಮೂಲಕ ಭಾರತ ಇತಿಹಾಸ ನಿರ್ಮಿಸಿದೆ.
ಭಾರತದ ಕರೆನ್ಸಿಗೆ ಜಾಗತಿಕ ಮಟ್ಟದಲ್ಲಿ ಮಾನ್ಯತೆ ದೊರಕಿಸಿಕೊಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿರುವ ಕೇಂದ್ರ ಸರ್ಕಾರ ಮಹತ್ತರ ಸಾಧನೆ ಮಾಡಿದೆ. ಅರಬ್ ಸಂಯುಕ್ತ ಸಂಸ್ಥಾನದಿಂದ ಕಚ್ಚಾ ತೈಲ ಖರೀದಿಗೆ ಭಾರತ ಇದೇ ಮೊದಲ ಬಾರಿಗೆ ರೂಪಾಯಿ ಮೌಲ್ಯದಲ್ಲಿ ಪಾವತಿ ಮಾಡಿದೆ.
ಭಾರತ ಜಗತ್ತಿನ ಮೂರನೆಯ ಅತಿ ದೊಡ್ಡ ತೈಲ ಗ್ರಾಹಕ ರಾಷ್ಟ್ರವಾಗಿದೆ. ಶೇಕಡ 85ರಷ್ಟು ತೈಲವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದೆ. ಡಾಲರ್ ಬದಲು ರೂಪಾಯಿಯಲ್ಲಿ ವ್ಯವಹಾರವನ್ನು ಇತ್ಯರ್ಥಪಡಿಸುವ ಮೂಲಕ ವಹಿವಾಟು ವೆಚ್ಚವನ್ನು ಕಡಿಮೆ ಮಾಡುವ ಗುರಿ ಹೊಂದಿದೆ.
ಈ ಹಿಂದೆಯೂ ಭಾರತ ಕಚ್ಚಾತೈಲ ಖರೀದಿ ಸಂದರ್ಭದಲ್ಲಿ ರೂಪಾಯಿಯಲ್ಲಿ ವ್ಯವಹಾರ ನಡೆಸಿತ್ತು. ಉಕ್ರೇನ್ ಯುದ್ಧದ ಸಂದರ್ಭ ರಷ್ಯಾದಿಂದ ರೂಪಾಯಿಯಲ್ಲಿ ಭಾರತ ಕಚ್ಚಾ ತೈಲ ಖರೀದಿಸಿತ್ತು. ಜಾಗತಿಕ ಮಟ್ಟದಲ್ಲಿ ತೈಲ ವ್ಯವಹಾರಗಳು ಅಮೆರಿಕದ ಡಾಲರ್ ಕರೆನ್ಸಿಯಲ್ಲಿ ನಡೆಯುತ್ತವೆ. ಡಾಲರ್ ಮತ್ತು ರೂಪಾಯಿ ಪರಿವರ್ತನೆ ಸಂಬಂಧ ಕೋಟ್ಯಂತರ ರೂಪಾಯಿಗಳನ್ನು ಹೆಚ್ಚುವರಿಯಾಗಿ ವೆಚ್ಚ ಮಾಡಬೇಕಾಗುತ್ತದೆ. ಸ್ಥಳೀಯ ಕರೆನ್ಸಿಯಲ್ಲಿ ವ್ಯವಹಾರ ನಡೆಸುವುದರಿಂದ ಹೆಚ್ಚುವರಿ ವೆಚ್ಚ ಉಳಿತಾಯ ಮಾಡಬಹುದಾಗಿದೆ.
ರಷ್ಯಾದೊಂದಿಗೆ ರೂಪಾಯಿಯಲ್ಲಿ ತೈಲ ಖರೀದಿಸಿದ ಸಂದರ್ಭದಲ್ಲಿ ಭಾರತ ಕೋಟ್ಯಂತರ ರೂ. ಉಳಿತಾಯ ಮಾಡಿದ್ದು, ಕಳೆದ ಜುಲೈನಲ್ಲಿ ಭಾರತ ಯುಎಇ ಜೊತೆ ಒಪ್ಪಂದ ಮಾಡಿಕೊಂಡಿತ್ತು. ಅಬುಧಾಬಿಯ ರಾಷ್ಟ್ರೀಯ ತೈಲ ಕಂಪನಿಯಿಂದ 10 ಲಕ್ಷ ಬ್ಯಾರೆಲ್ ಕಚ್ಚಾ ತೈಲ ಖರೀದಿಗೆ ರೂಪಾಯಿ ಮೌಲ್ಯದಲ್ಲಿ ಹಣ ಪಾವತಿಸಲಾಗಿದೆ.