ಕೋಲಾರ: ಕೋಲಾರದ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ಐಫೋನ್ ತಯಾರಿಕಾ ಘಟಕ ವಿಸ್ಟ್ರಾನ್ ಕಂಪನಿಯಲ್ಲಿ ಶೀಘ್ರದಲ್ಲೇ ಕೆಲಸ ಆರಂಭಿಸಲು ನಿರ್ಧರಿಸಲಾಗಿದ್ದು, ಇದರಿಂದಾಗಿ ಸಾವಿರಾರು ಕಾರ್ಮಿಕರು ನಿಟ್ಟುಸಿರುಬಿಟ್ಟಿದ್ದಾರೆ.
ಕಿಡಿಗೇಡಿಗಳಿಂದ ಧ್ವಂಸಗೊಂಡಿದ್ದ ಕಂಪನಿಯಲ್ಲಿ ಮತ್ತೆ ಕೆಲಸ ಆರಂಭಿಸಲಾಗುವುದು. ಕಂಪನಿಯಲ್ಲಿ ದಾಂಧಲೆ ಮಾಡಿದವರನ್ನು ಬಂಧಿಸುವ ಪ್ರಕ್ರಿಯೆ ಮುಂದುವರೆದಿದೆ. ದಾಂಧಲೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಎಸ್ಎಫ್ಐ ತಾಲೂಕು ಅಧ್ಯಕ್ಷನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಇನ್ನೂ ವಿಸ್ಟ್ರಾನ್ ನಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ವೇತನ ಪಾವತಿಯಾಗದ ಬಗ್ಗೆ ಆಕ್ರೋಶಗೊಂಡ ಕಾರ್ಮಿಕರು ಕಾರ್ಖಾನೆಯಲ್ಲಿ ದಾಂಧಲೆ ನಡೆಸಿದ ಬಗ್ಗೆ ಕೇಂದ್ರ ಸರ್ಕಾರ ತೀವ್ರ ಕಳವಳ ವ್ಯಕ್ತಪಡಿಸಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಕೇಂದ್ರ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಚರ್ಚೆ ನಡೆಸಿದ್ದಾರೆ. ರಾಜ್ಯ ಕಾರ್ಮಿಕ ಇಲಾಖೆ ಕೂಡ ತನಿಖೆ ನಡೆಸಿದ್ದು ವಿಸ್ಟ್ರಾನ್ ನಲ್ಲಿ ಕಾರ್ಮಿಕರ ಹಕ್ಕುಗಳು ಉಲ್ಲಂಘನೆ ಆಗಿರುವುದನ್ನು ಗುರುತಿಸಿದೆ ಎನ್ನಲಾಗಿದೆ.
ಕಂಪನಿಯಲ್ಲಿ ಸಾವಿರಾರು ನೌಕಕರು ದಾಂಧಲೆ ನಡೆಸಿದ ಪರಿಣಾಮ ಭಾರೀ ಪ್ರಮಾಣದ ಹಾನಿಯಾಗಿದ್ದು, ಘಟನೆಯ ತನಿಖೆಗೆ ಆದೇಶಿಸಲಾಗಿದೆ. ಕೆಲಸವಿಲ್ಲದೇ ಆತಂಕದಲ್ಲಿದ್ದ ಕಾರ್ಮಿಕರಿಗೆ ಕಂಪನಿ ಕೆಲಸ ಆರಂಭಿಸುವ ಸುಳಿವು ನೀಡಿರುವುದು ನೆಮ್ಮದಿ ತಂದಿದೆ ಎಂದು ಹೇಳಲಾಗಿದೆ.