
ಬೆಂಗಳೂರು: ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ(ಕೆಎಂಎಫ್) ನಂದಿನಿ ಮೊಸರು, ಮಜ್ಜಿಗೆ ಮತ್ತು ಲಸ್ಸಿ ದರ ಮರು ಪರಿಷ್ಕರಣೆ ಮಾಡಿದೆ.
ಕೇಂದ್ರ ಸರ್ಕಾರದ ವಿತ್ತ ಸಚಿವಾಲಯ ಅಧಿಸೂಚನೆಯ ಅನ್ವಯ ಜುಲೈ 18 ರಿಂದ ಜಾರಿಗೆ ಬರುವಂತೆ ಮೊಸರು, ಮಜ್ಜಿಗೆ ಮತ್ತು ಸಿಹಿ ಲಸ್ಸಿ ಉತ್ಪನ್ನಗಳ ಮೇಲೆ ಜಿ.ಎಸ್.ಟಿ. ವಿಧಿಸಲಾಗಿದೆ
ಜುಲೈ 18 ರಂದು ಪರಿಷ್ಕರಿಸಿದ ದರದಲ್ಲಿ ಕೊಂಚ ಇಳಿಕೆ ಮಾಡಲಾಗಿದ್ದು, ನೂತನ ದರಪಟ್ಟಿಯನ್ನು ಪ್ರಕಟಿಸಲಾಗಿದೆ. ಜುಲೈ 19 ರಿಂದ ಮರುಪರಿಷ್ಕರಿಸಿದ ದರಗಳು ಚಾಲ್ತಿಗೆ ಬರಲಿವೆ.
ಇಂದಿನ ದರದಲ್ಲಿ ಕೊಂಚ ಕಡಿಮೆ ಮಾಡಲಾಗಿದೆ. ನಾಳೆಯಿಂದ 200 ml ಮೊಸರು 10.50 ರೂ.ಗೆ ಲಭ್ಯವಾಗಲಿದೆ. 500 ಗ್ರಾಂಗೆ 23 ರೂಪಾಯಿ, 1 ಲೀಟರ್ ಗೆ 45 ರೂಪಾಯಿ ದರ ನಿಗದಿಪಡಿಸಲಾಗಿದೆ.
ಇದೇ ರೀತಿ ಮಜ್ಜಿಗೆ ಮತ್ತು ಲಸ್ಸಿ ದರಗಳನ್ನು ಕೂಡ ಇಳಿಕೆ ಮಾಡಲಾಗಿದೆ. ಮೊಸರು ಮತ್ತು ಮಜ್ಜಿಗೆ ಪೊಟ್ಟಣಗಳ ಮೇಲೆ ಈಗಾಗಲೇ ಹಳೆ ದರ ಮುದ್ರಿತವಾಗಿದ್ದು, ಮುದ್ರಿತ ದರಗಳ ಪ್ಯಾಕಿಂಗ್ ಸಾಮಗ್ರಿಗಳ ದಾಸ್ತಾನು ಮುಗಿಯುವವರೆಗೆ ಇಂಕ್ ಜೆಟ್ ಮೂಲಕ ಪರಿಷ್ಕೃತ ದರಗಳನ್ನು ಪೊಟ್ಟಣಗಳ ಮೇಲೆ ಮುದ್ರಿಸಿ ಮಾರುಕಟ್ಟೆಗೆ ಸರಬರಾಜು ಮಾಡಲಾಗುತ್ತಿದೆ. ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸುವಂತೆ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕರು ಕೋರಿದ್ದಾರೆ.
