ಬೆಂಗಳೂರು: ದೇಶದಲ್ಲಿಯೇ ಕೆಎಂಎಫ್ ನಂಬರ್ ಒನ್ ಮಾಡುವ ಗುರಿ ಹೊಂದಲಾಗಿದ್ದು, ನಂದಿನಿ ಉತ್ಪನ್ನಗಳನ್ನು ದೇಶಾದ್ಯಂತ ವಿಸ್ತರಿಸಲಾಗುವುದು ಎಂದು ಕರ್ನಾಟಕ ಹಾಲು ಮಹಾಮಂಡಳಿ -ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.
ಕೆಎಂಎಫ್ ಅಧ್ಯಕ್ಷರಾಗಿ ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕೆಎಂಎಫ್ ಆಡಳಿತ ಮಂಡಳಿ ಮತ್ತು ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಕೆಎಂಎಫ್ ನಂಬರ್ ಒನ್ ಮಾಡುವ ಗುರಿ ಹೊಂದಲಾಗಿದೆ. ಎಲ್ಲಾ ಹಾಲು ಒಕ್ಕೂಟದ ವ್ಯಾಪ್ತಿಯ ರಾಸುಗಳಿಗೆ ಗುಂಪು ವಿಮೆ ಸೌಲಭ್ಯ ಕಲ್ಪಿಸಲಾಗುವುದು. 3 ಪಶು ಆಹಾರ ಘಟಕಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದ್ದಾರೆ.
3 ಒಕ್ಕೂಟಗಳ ವ್ಯಾಪ್ತಿಯಲ್ಲಿ ರಾಸುಗಳಿಗೆ ವಿಮೆ ಸೌಲಭ್ಯವಿದ್ದು, ಪ್ರಸ್ತುತ 8 ಲಕ್ಷ ರಾಸುಗಳಿಗೆ ಗುಂಪು ವಿಮೆಗೆ ಒಳಪಡಿಸಲಾಗಿದೆ. ಎಲ್ಲಾ ಹಾಲು ಒಕ್ಕೂಟದ ವ್ಯಾಪ್ತಿಯ ರಾಸುಗಳಿಗೆ ಗುಂಪು ವಿಮೆ ಸೌಲಭ್ಯ ಕಲ್ಪಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಹೊರ ರಾಜ್ಯಗಳಲ್ಲಿ ನಂದಿನಿ ಉತ್ಪನ್ನಗಳ ಮಾರಾಟ ವಿಸ್ತರಿಸಲಾಗಿದೆ. 2021 -22 ನೇ ಸಾಲಿನಲ್ಲಿ 90.62 ಲಕ್ಷ ಲೀಟರ್ ಹಾಲು ಶೇಖರಿಸಿಡುವುದು ಗರಿಷ್ಠ ದಾಖಲೆಯಾಗಿದ್ದು, ಮುಂದಿನ ಮೂರು ವರ್ಷಗಳ ಅವಧಿಯಲ್ಲಿ 1.35 ಕೋಟಿ ಲೀಟರ್ ಹಾಲು ಶೇಖರಣೆ ಗುರಿ ಹೊಂದಲಾಗಿದೆ ಎಂದು ತಿಳಿಸಿದ್ದಾರೆ.