ಆರ್ಥಿಕ ಮುಗ್ಗಟ್ಟಿನ ಸಂದರ್ಭದಲ್ಲಿ ಉಳಿತಾಯ ನೆರವಿಗೆ ಬರುತ್ತದೆ. ಮಾರುಕಟ್ಟೆಯಲ್ಲಿ ಸಾಕಷ್ಟು ಉಳಿತಾಯ ಯೋಜನೆಗಳಿವೆ. ಆದ್ರೆ ಯಾವ ಯೋಜನೆ ಉಳಿತಾಯಕ್ಕೆ ಉತ್ತಮ ಎಂಬ ಪ್ರಶ್ನೆ ಕಾಡುತ್ತದೆ. ಹೂಡಿಕೆ ಮಾಡಿದ ಹಣ ಸುರಕ್ಷಿತವಾಗಿರಬೇಕೆಂದ್ರೆ ಅಂಚೆ ಕಚೇರಿಯ ಕಿಸಾನ್ ವಿಕಾಸ್ ಪತ್ರ ಉತ್ತಮ ಯೋಜನೆಗಳಲ್ಲಿ ಒಂದು.
ಕಿಸಾನ್ ವಿಕಾಸ್ ಪತ್ರವನ್ನು ಅಂಚೆ ಕಚೇರಿ ಜೊತೆ ದೇಶದ ಅನೇಕ ದೊಡ್ಡ ಬ್ಯಾಂಕುಗಳಿಂದ ಖರೀದಿಸಬಹುದು. ಇದರಲ್ಲಿ ನಿಗದಿತ ಅವಧಿಯ ನಂತರ ಹಣ ದ್ವಿಗುಣಗೊಳ್ಳುತ್ತದೆ. ಈ ಯೋಜನೆಯಲ್ಲಿ ಕನಿಷ್ಠ 1000 ರೂಪಾಯಿ ಹೂಡಿಕೆ ಮಾಡಬಹುದು. ಗರಿಷ್ಠ ಹೂಡಿಕೆ ಮಿತಿಯಿಲ್ಲ. ಇದರ ಮುಕ್ತಾಯ ಅವಧಿ 124 ತಿಂಗಳುಗಳು.
ಭಾರತೀಯ ನಾಗರಿಕರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ರೈತರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ. ಹಾಗಾಗಿ ಇದಕ್ಕೆ ರೈತ ಎಂಬ ಹೆಸರನ್ನು ಇಡಲಾಗಿದೆ. ಆದ್ರೆ ಇದು ರೈತರಿಗೆ ಮಾತ್ರ ಸೀಮಿತವಾಗಿಲ್ಲ. ಭಾರತೀಯ ನಾಗರಿಕರು ಹೂಡಿಕೆ ಮಾಡಬಹುದು.
ಕಿಸಾನ್ ವಿಕಾಸ್ ಪತ್ರದ ಅಡಿಯಲ್ಲಿ ಪ್ರಸ್ತುತ ಒಂದು ವರ್ಷಕ್ಕೆ ಶೇಕಡಾ 6.9 ರಷ್ಟು ಬಡ್ಡಿ ಸಿಗ್ತಿದೆ. 124 ತಿಂಗಳುಗಳಲ್ಲಿ ಹೂಡಿಕೆ ಮಾಡಿದ ಮೊತ್ತವು ದ್ವಿಗುಣಗೊಳ್ಳುತ್ತದೆ. ಈ ಯೋಜನೆಯಡಿ ಹೂಡಿಕೆದಾರರು ಯಾವುದೇ ಸಮಯದಲ್ಲಿ ತಮ್ಮ ಹಣವನ್ನು ಹಿಂಪಡೆಯಬಹುದು. ಆದರೆ ಹೂಡಿಕೆದಾರರು ಒಂದು ವರ್ಷದೊಳಗೆ ತನ್ನ ಮೊತ್ತವನ್ನು ಹಿಂತೆಗೆದುಕೊಂಡರೆ ಯಾವುದೇ ಬಡ್ಡಿ ಸಿಗುವುದಿಲ್ಲ. ಹೂಡಿಕೆದಾರರು ಎರಡೂವರೆ ವರ್ಷಗಳ ನಂತರ ಹೂಡಿಕೆ ವಾಪಸ್ ಪಡೆದರೆ ಶೇಕಡಾ 6.9 ರಷ್ಟು ವಾರ್ಷಿಕ ದರದಲ್ಲಿ ಬಡ್ಡಿಯನ್ನು ಪಡೆಯುತ್ತಾರೆ.
ಕಿಸಾನ್ ವಿಕಾಸ್ ಪತ್ರ ಒಂದು ಹೂಡಿಕೆ ಯೋಜನೆಯಾಗಿದೆ. ಇದನ್ನು ಸುಲಭವಾಗಿ ವರ್ಗಾಯಿಸಬಹುದು. ಕೆಲವು ಷರತ್ತುಗಳ ಮೇಲೆ ಇದನ್ನು ವರ್ಗಾಯಿಸಲಾಗುತ್ತದೆ. ಖಾತೆದಾರರ ಮರಣದ ನಂತರ ಕಿಸಾನ್ ವಿಕಾಸ್ ಪತ್ರವನ್ನು ನಾಮಿನಿಯ ಹೆಸರಿನಲ್ಲಿ ವರ್ಗಾಯಿಸಲಾಗುತ್ತದೆ. ಜಂಟಿ ಖಾತೆಯಾಗಿದ್ದರೆ ಒಬ್ಬ ಖಾತೆದಾರನ ಸಾವಿನ ನಂತರ ಇನ್ನೊಬ್ಬರ ಹೆಸರಿಗೆ ವರ್ಗಾಯಿಸಲಾಗುತ್ತದೆ. ನ್ಯಾಯಾಲಯದ ಆದೇಶದ ನಂತರವೂ ಈ ವರ್ಗಾವಣೆ ನಡೆಯುತ್ತದೆ. ಕಿಸಾನ್ ವಿಕಾಸ್ ಪತ್ರವನ್ನು ಒಂದು ಅಂಚೆ ಕಚೇರಿಯಿಂದ ಮತ್ತೊಂದು ಅಂಚೆ ಕಚೇರಿಗೆ ವರ್ಗಾಯಿಸಬಹುದು.