ಬೆಂಗಳೂರು: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಸಹಾಯಧನ ಪಡೆಯಲು ಸುಳ್ಳು ಮಾಹಿತಿ ನೀಡಿದ ರೈತರಿಗೆ ಶಾಕಿಂಗ್ ನ್ಯೂಸ್ ಇಲ್ಲಿದೆ.
ಪಡೆದ ಹಣ ಹಿಂತಿರುಗಿಸುವಂತೆ ನೋಟಿಸ್ ನೀಡಲಾಗ್ತಿದೆ. ಆದಾಯ ತೆರಿಗೆ ಪಾವತಿಸುವ ಸಾವಿರಾರು ರೈತರು ಸುಳ್ಳು ಮಾಹಿತಿ ನೀಡಿ ಕಿಸಾನ್ ಸಮ್ಮಾನ್ ಯೋಜನೆಯ ಸಹಾಯಧನ ಪಡೆದು ವಂಚಿಸಿದ್ದಾರೆ. ಇಂತಹ ಹಲವಾರು ಪ್ರಕರಣಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಕೇಂದ್ರ ಕೃಷಿ ಸಚಿವಾಲಯದ ಸೂಚನೆಯಂತೆ ಕ್ರಮ ಕೈಗೊಳ್ಳಲಾಗಿದೆ.
ಬ್ಯಾಂಕ್ ಅಕೌಂಟ್, ಆಧಾರ್ ಪರಿಶೀಲನೆ ಸಂದರ್ಭದಲ್ಲಿ ರಾಜ್ಯದಲ್ಲಿ 85,208 ರೈತರು ಸುಳ್ಳು ಮಾಹಿತಿ ನೀಡಿ ಸಹಾಯಧನ ಪಡೆದುಕೊಂಡಿರುವುದನ್ನು ಕೇಂದ್ರ ಕೃಷಿ ಮಂತ್ರಾಲಯ ಗುರುತಿಸಿದ್ದು, ರಾಜ್ಯ ಸರ್ಕಾರಕ್ಕೆ ಇಂತಹ ರೈತರ ಪಟ್ಟಿಯನ್ನು ನೀಡಲಾಗಿದೆ.
ಯೋಜನೆಯಡಿ ಸಹಾಯಧನ ಪಡೆದುಕೊಂಡ ರೈತರಿಗೆ ಕೃಷಿ ಇಲಾಖೆಯ ವತಿಯಿಂದ ನೋಟಿಸ್ ನೀಡಲಾಗುತ್ತಿದೆ. ಸಣ್ಣ ಮತ್ತು ಅತಿಸಣ್ಣ ರೈತರಿಗೆ ಅನುಕೂಲವಾಗುವಂತೆ ವಾರ್ಷಿಕ ಕೇಂದ್ರದಿಂದ ತಲಾ 6000 ರೂ. ಮತ್ತು ರಾಜ್ಯ ಸರ್ಕಾರದಿಂದ 4000 ರೂ. ಕಿಸಾನ್ ಸಮ್ಮಾನ್ ಯೋಜನೆಯಡಿ ಫಲಾನುಭವಿಗಳಿಗೆ ನೀಡಲಾಗುತ್ತಿದೆ.
2 ಹೆಕ್ಟೇರ್ ಗಿಂತ ಹೆಚ್ಚು ಕೃಷಿ ಜಮೀನು ಇಲ್ಲದ ರೈತರು ಸಹಾಯಧನ ಪಡೆಯಬಹುದಾಗಿದ್ದು ಇದರಲ್ಲಿ ಆದಾಯ ತೆರಿಗೆ ಪಾವತಿಸುವ ರೈತರು ಕೂಡ ಸುಳ್ಳು ಮಾಹಿತಿ ನೀಡಿ ಸಹಾಯಧನ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಅಂತಹ ರೈತರ ಮಾಹಿತಿಯನ್ನು ಕಲೆ ಹಾಕಲಾಗಿದ್ದು, ಕೃಷಿ ಇಲಾಖೆ ಮೂಲಕ ಸಹಾಯಧನ ವಸೂಲು ಮಾಡಲು ಕ್ರಮ ಕೈಗೊಂಡು ನೋಟಿಸ್ ನೀಡಲಾಗ್ತಿದೆ ಎಂದು ಹೇಳಲಾಗಿದೆ.