ಬೆಂಗಳೂರು: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಅನುಕೂಲವಾಗುವಂತೆ ವಾರ್ಷಿಕ 6,000 ರೂ. ಜಮಾ ಮಾಡಲಾಗುತ್ತದೆ.
ಆದರೆ, ಯೋಜನೆ ದುರ್ಬಳಕೆ ಮಾಡಿಕೊಂಡಿದ್ದು, ವಿವಿಧ ಪೊಲೀಸ್ ಠಾಣೆಗಳಲ್ಲಿ ಎಫ್ಐಆರ್ ದಾಖಲಾಗಿವೆ. ರಾಜ್ಯದಲ್ಲಿ ಸುಮಾರು 2.40 ಲಕ್ಷ ಅನರ್ಹರ ಖಾತೆಗಳಿಗೆ ಕಿಸಾನ್ ಸಮ್ಮಾನ್ ಯೋಜನೆಯ ಸಹಾಯಧನ ವರ್ಗಾವಣೆಯಾಗಿದ್ದು, ಕೃಷಿ ಇಲಾಖೆಯಿಂದ ನೋಟಿಸ್ ಜಾರಿಗೊಳಿಸಿ ಅಕ್ರಮವಾಗಿ ಪಡೆದುಕೊಂಡ ಸಹಾಯಧನ ವಾಪಸ್ ನೀಡಲು ಸೂಚಿಸಲಾಗಿದೆ. ಇಲ್ಲದಿದ್ದರೆ ಸರ್ಕಾರಿ ಸೌಲಭ್ಯ ಕಡಿತಗೊಳಿಸುವ ಎಚ್ಚರಿಕೆ ನೀಡಲಾಗಿದೆ. ಇದಾದ ನಂತರ ಸುಮಾರು 1.21 ಕೋಟಿ ರೂ ಸರ್ಕಾರಕ್ಕೆ ಮರುಪಾವತಿಯಾಗಿದೆ.
ದೇಶಾದ್ಯಂತ ಸುಮಾರು 58.08 ಲಕ್ಷ ಮಂದಿ ಅನರ್ಹರು ರೈತರ ಹೆಸರಿನಲ್ಲಿ ಸಹಾಯಧನ ಪಡೆಯುತ್ತಿದ್ದಾರೆ ಎಂದು ಹೇಳಲಾಗಿದೆ. ಅನೇಕ ರೈತರಿಗೆ ತಮ್ಮ ಜಮೀನಿಗೆ ಬೇರೆಯವರು ಸಹಾಯಧನ ಪಡೆಯುತ್ತಿರುವ ವಿಚಾರ ಗೊತ್ತೇ ಇಲ್ಲ. ಕೇಂದ್ರ ಸರ್ಕಾರ ಕಿಸಾನ್ ಸಮ್ಮಾನ್ ಯೋಜನೆಗೆ ರೈತರು ನೀಡಿದ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿದಾಗ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಇ -ಕೆವೈಸಿ ಮಾಡಿಸುವಂತೆ ರೈತರಿಗೆ ಸೂಚನೆ ನೀಡಿದ್ದು, ಅರ್ಹರು ಅನರ್ಹ ಫಲಾನುಭವಿಗಳನ್ನು ಗುರುತಿಸಲಾಗುತ್ತಿದೆ. ಅಂತಹ ಅನರ್ಹ ರೈತರಿಗೆ ನೋಟಿಸ್ ನೀಡಿ ಹಣ ಮರುವಸೂಲಿ ಮಾಡುವ ಕಾರ್ಯ ಪ್ರಗತಿಯಲ್ಲಿದೆ ಎನ್ನಲಾಗಿದೆ.