ಪ್ರಧಾನಿ ನರೇಂದ್ರ ಮೋದಿ ಕಳೆದ ವರ್ಷ ಆಗಸ್ಟ್ನಲ್ಲಿ ಕಿಸಾನ್ ರೈಲು ಯೋಜನೆಯನ್ನ ಘೋಷಣೆ ಮಾಡಿದ್ದರು. ನಗರ ಪ್ರದೇಶಗಳಲ್ಲಿಯೂ ತಮ್ಮ ಆಹಾರ ಉತ್ಪನ್ನಗಳನ್ನ ಮಾರಾಟ ಮಾಡಲು ಅನುಕೂಲವಾಗುವ ಸಲುವಾಗಿ ಈ ಯೋಜನೆ ಜಾರಿಗೆ ತರೋದಾಗಿ ಕೇಂದ್ರ ಸರ್ಕಾರ ಹೇಳಿತ್ತು. ಇದೀಗ 2021ರ ಕೇಂದ್ರ ಬಜೆಟ್ನಲ್ಲಿ ಕಿಸಾನ್ ರೈಲು ಯೋಜನೆ ವಿಸ್ತರಣೆಯನ್ನ ಸರ್ಕಾರ ಪ್ರಕಟಿಸುವ ಸಾಧ್ಯತೆ ಇದೆ.
ರೈಲ್ವೆ ಸಚಿವಾಲಯ 2021-22ರ ಆರ್ಥಿಕ ವರ್ಷದಲ್ಲಿ ಹೆಚ್ಚಿನ ರೈತರನ್ನ ತಲುಪಲು ಎದುರು ನೋಡುತ್ತಿದೆ. ಅಲ್ಲದೇ ಈ ಯೋಜನೆ ರೈತರ ಕಲ್ಯಾಣಕ್ಕೆ ಮತ್ತಷ್ಟು ಉತ್ತೇಜನ ನೀಡಲಿದೆ. ಮಾತ್ರವಲ್ಲದೇ ರೈತರ ಆದಾಯವನ್ನ ದ್ವಿಗುಣಗೊಳಿಸುವ ಧ್ಯೇಯವನ್ನ ಸಾಧಿಸಲು ಸಹಾಯ ಮಾಡುತ್ತದೆ.
ಈ ಕಿಸಾನ್ ರೈಲಿನಲ್ಲಿ ರೈತರು ತಾವು ಬೆಳೆದ ಹಣ್ಣು ಹಾಗೂ ತರಕಾರಿಗಳನ್ನ ರಾಷ್ಟ್ರಾದ್ಯಂತ 50 ಪ್ರತಿಶತ ಸಬ್ಸಿಡಿ ದರದಲ್ಲಿ ಸಾಗಿಸಬಹುದಾಗಿದೆ. ತಮ್ಮ ಉತ್ಪನ್ನಗಳ ಮಾರಾಟಕ್ಕೆ ರೈತರು 50 ಪ್ರತಿಶತ ಸಹಾಯಧನ ಪಡೆಯಲಿದ್ದಾರೆ. ಈ ಸೌಕರ್ಯದಿಂದಾಗಿ ರೈತರು ತಮ್ಮ ಉತ್ಪನ್ನಗಳ ಮೇಲೆ ಸಾಮಾನ್ಯ ದರಕ್ಕಿಂತ ಹೆಚ್ಚಿನ ಲಾಭ ಪಡೆಯಲಿದ್ದಾರೆ.