ಬೆಂಗಳೂರು: ರಾಜ್ಯದ ಉದ್ಯಮಿಗಳಿಗೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ(KIADB) ಶುಭ ಸುದ್ದಿ ಸಿಕ್ಕಿದೆ. ಹೂಡಿಕೆ ಮತ್ತು ಸುಸ್ಥಿರ ಅಭಿವೃದ್ದಿಗಾಗಿ ಕೈಗಾರಿಕೆ ನೀತಿಗೆ ತಿದ್ದುಪಡಿ ತರಲಾಗಿದೆ.
ಕೈಗಾರಿಕೆಗಳ ಬಲವರ್ಧನೆಗೆ ಕ್ರಯಪತ್ರ ನೀಡುವ ಪ್ರಕ್ರಿಯೆ ಸರಳಗೊಳಿಸಲು ಕ್ರಮಕೈಗೊಳ್ಳಲಾಗಿದ್ದು, ಬೆಳಗಾವಿ ಅಧಿವೇಶನದಲ್ಲಿ ಈ ಕುರಿತಾದ ವಿಧೇಯಕ ಮಂಡಿಸಲಾಗುವುದು. ನಿಗದಿತ ಅವಧಿಯಲ್ಲಿ ಕೈಗಾರಿಕೆ ಉದ್ದೇಶ ಪೂರೈಕೆಯಾಗದೆ ಇದ್ದರೆ ಮಂಜೂರಾದ ಭೂಮಿ ಉದ್ಯಮಿಗಳ ಕೈಸೇರುವುದು ಕಷ್ಟಸಾಧ್ಯ. ಹೀಗಾಗಿ ಯೋಜನೆ ಪೂರ್ಣಗೊಳಿಸಲು ಇಲಾಖೆಯಿಂದ ಅಗತ್ಯ ಸಹಕಾರ ನೀಡಲಾಗುವುದು.
ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪನೆಗೊಂಡ ಉದ್ಯಮಗಳು ಉತ್ಪಾದನೆ ಹಂತ ತಲುಪಿದರೂ, 10 ವರ್ಷದವರೆಗೆ ಕೈಗಾರಿಕಾ ಪ್ರದೇಶದ ಮೇಲೆ ಉದ್ಯಮಿಗಳಿಗೆ ಪೂರ್ಣಪ್ರಮಾಣದ ಹಕ್ಕು ಇರಲಿಲ್ಲ. ಹಕ್ಕಿನ ಪರವಾನಿಗೆ ಇಲ್ಲದ ಕಾರಣ ಹೊಸ ಯೋಜನೆ ಕೈಗೆತ್ತಿಕೊಳ್ಳಲು ಮೂಲ ಉದ್ಯಮಿಗಳು ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಕಚೇರಿಗೆ ಅಲೆದಾಡಬೇಕಿದೆ.
10 ವರ್ಷದ ಹಿಂದೆ ಕೈಗಾರಿಕಾ ಭೂಮಿ ಮಂಜೂರಾಗಿದ್ದರೂ, ಸೇಲ್ ಡೀಡ್ ಪಡೆಯುವ ಸಂದರ್ಭದಲ್ಲಿ ಪ್ರಸ್ತುತ ಮಾರುಕಟ್ಟೆ ಬೆಲೆಗೆ ಭೂಮಿ ಖರೀದಿಸಬೇಕಾಗುತ್ತದೆ. ಈಗ 10 ವರ್ಷದ ಬದಲಿಗೆ 15 ದಿನದೊಳಗೆ ಸೇಲ್ ಡೀಡ್ ಮಾಡಿಕೊಡುವ ವ್ಯವಸ್ಥೆ ತರಲಾಗುತ್ತದೆ.
ಉದ್ಯಮಿಗಳಿಗೆ ಕ್ರಯಪತ್ರ ಸಲೀಸಲಾಗಲಿದೆ. ಕೈಗಾರಿಕಾ ಪ್ರದೇಶದಲ್ಲಿ ಮಂಜೂರಾದ ಭೂಮಿಯಲ್ಲಿ ಶೇಕಡ 50ರಷ್ಟು ಬಳಕೆ ಕಡ್ಡಾಯವಾಗಿದ್ದು, ಉತ್ಪಾದನಾ ಪ್ರಕ್ರಿಯೆ ಆರಂಭಿಸುವುದು ಯೋಜನೆಯ ಅಂತ್ಯವೆಂದು ಪರಿಗಣಿಸಲಾಗುತ್ತದೆ. ನಂತರದ 15 ದಿನಗಳ ಒಳಗೆ ಉದ್ಯಮಿಗಳು ಸೇಲ್ ಡೀಡ್ ಪಡೆಯಬಹುದಾಗಿದೆ ಎಂದು ಹೇಳಲಾಗಿದೆ.
ಇದಕ್ಕೆ ಆಕ್ಷೇಪ ಕೂಡ ವ್ಯಕ್ತವಾಗಿದೆ. ಸರ್ಕಾರದ ಸಬ್ಸಿಡಿ ಮೂಲಕ ಕೈಗಾರಿಕಾ ಪ್ರದೇಶದಲ್ಲಿ ಭೂಮಿ ಪಡೆದು ಪಡೆದುಕೊಂಡು ಬೇಗನೆ ಭೂಮಾಲೀಕತ್ವ ಹೊಂದುವ ಮೂಲಕ ರಿಯಲ್ ಎಸ್ಟೇಟ್ ಗೆ ಮಾರಾಟ ಮಾಡಲಾಗುತ್ತದೆ. ಬಹುತೇಕ ರಾಜಕಾರಣಿಗಳು ಕೈಗಾರಿಕಾ ಭೂಮಿ ಹೊಂದಿದ್ದು, ಇಂತಹ ತಿದ್ದುಪಡಿಯಿಂದ ದುರ್ಬಳಕೆ ಆಗುವ ಸಾಧ್ಯತೆ ಇದೆ ಎಂದು ಆರೋಪಿಸಲಾಗಿದೆ.